

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊಲದ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಪಾಕಿಸ್ತಾನದ ವಿರುದ್ಧ ಸರಣಿ ಗೆದ್ದು ಸಂಪೂರ್ಣ ವಿಶ್ವಾಸದಲ್ಲಿದ್ದ ಪ್ರವಾಸಿ ತಂಡವನ್ನು ಬಗ್ಗು ಬಡಿದಿದ್ದಾರೆ. ಆರಂಭಿಕ ಆಘಾತದ ಹೊರತಾಗಿಯೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲು ಪ್ರಬಲ ಹಿಡಿತ ಸಾಧಿಸಿದ ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ತಯಾರಿ ಆರಂಭಿಸಿದ್ದು, ಸರಣಿಯನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ತನ್ನ ಹಾದಿಯನ್ನು ಸುಗಮ ಮಾಡಿಕೊಳ್ಳಲು ರೆಡಿಯಾಗಿದೆ.
ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಮೋಘ ಶತಕ ಸಿಡಿಸುವ ಮೂಲಕ ಅರ್. ಅಶ್ವಿನ್ ಹಾಗೂ ರಿಷಭ್ ಪಂತ್ ತಂಡಕ್ಕೆ ಆಸರೆಯಾಗಿದ್ದರು. ಇದರಲ್ಲಿ ಹೆಚ್ಚು ಹೈಲೈಟ್ ಆಗಿದ್ದು, ರಿಷಭ್ ಸಿಡಿಸಿದ ಶತಕ. ಏಕೆಂದರೆ 635 ದಿನಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿದ ರಿಷಭ್ ಶತಕ ಸಿಡಿಸುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ರಿಷಭ್ ಸಿಡಿಸಿದ ಸ್ಫೋಟಕ ಶತಕಕ್ಕೆ ಕ್ರೀಡಾ ತಾರೆಯರು ಸೇರಿದಂತೆ ಅಭಿಮಾನಿಗಳು ಕೊಂಡಾಡಿದ್ದರು. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಸಿಮ್ ಅಕ್ರಮ್ ಮಾತನಾಡಿದ್ದು, ರಿಷಭ್ರನ್ನು ಹಾಡಿ ಹೊಗಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವಸಿಮ್, ಅಪಘಾತದಿಂದ ಚೇತರಿಸಿಕೊಂಡ ನಂತರ ರಿಷಭ್ ಇಂತಹ ಅದ್ಭುತ ಪ್ರದರ್ಶನವನ್ನು ನೀಡಿರುವುದು ಪವಾಡ ಎಂದರೆ ತಪ್ಪಾಗಲಾರದು. ಆತ ಸೂಪರ್ಮ್ಯಾನ್ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾನೆ. ಆತನಿಗೆ ಅಪಘಾತವಾದ ಸುದ್ದಿ ತಿಳಿದು ಪಾಕಿಸ್ತಾನದಲ್ಲೂ ಕೂಡ ಜನ ಚಿಂತಿತರಾಗಿದ್ದರು, ಆತ ಶೀಘ್ರ ಗುಣಮುಖನಾಗಲಿ ಎಂದು ನಾನು ಕೂಡ ಸರಣಿ ಟ್ವೀಟ್ಗಳನ್ನು ಮಾಡಿದ್ದೆ.
ಆತ ಐಪಿಎಲ್ನಲ್ಲಿ 40ರ ಸರಾಸರಿ ಹಾಗೂ 155ರ ಸ್ಟ್ರೈಕ್ ರೇಟ್ನಲ್ಲಿ 446 ರನ್ಗಳನ್ನು ಸಿಡಿಸಿ ಟಿ20 ಮಾದರಿಗೆ ಕಮ್ಬ್ಯಾಕ್ ಮಾಡಿದ. ಟೆಸ್ಟ್ ಕ್ರಿಕೆಟ್ನಲ್ಲಿ ಆತ ಆಡುವ ರೀತಿ ಆಸ್ಟ್ರೇಲಿಯಾದಲ್ಲಿ ಅವರು ಬಾರಿಸಿದ್ದ ಶತಕ ಅದ್ಭುತವಾಗಿತ್ತು. ಇಂಗ್ಲೆಂಡ್ ವಿರುದ್ಧ ಪಂತ್ ಅವರ ಬ್ಯಾಟಿಂಗ್ ಅದರಲ್ಲಿಯೂ ಜೇಮ್ಸ್ ಆಂಡರ್ಸನ್ ಮತ್ತು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ವಿರುದ್ಧ ರಿವರ್ಸ್ ಸ್ಕೂಪ್ ಶಾಟ್ ನಿಜಕ್ಕೂ ವಿಶೇಷವಾಗಿತ್ತು.
ಅಂಥಾ ಭಯಾನಕ ಅಪಘಾತದ ಬಳಿಕ ಸಂಪೂರ್ಣ ಗುಣಮುಖರಾಗಿ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿ ಮಾನಸಿಕವಾಗಿ ಅಷ್ಟೊಂದು ಶಕ್ತಿಯುತವಾಗಿ ಚೇತರಿಕೆ ಕಂಡಿರುವುದು ನಿಜಕ್ಕೂ ಶ್ಲಾಘನೀಯ. ನನ್ನ ಪ್ರಕಾರ ಪ್ರಪಂಚದಲ್ಲಿ ತಲೆಮಾರಿನಿಂದ ತಲೆಮಾರಿಗೆ ಯುವ ಜನರನ್ನು ಪ್ರೇರೇಪಿಸಲು ರಿಷಭ್ ಪಂತ್ ಅವರ ಕಥೆಯನ್ನು ಹೇಳಬೇಕಾಗಿದೆ. ಪ್ರತಿಯೊಬ್ಬ ಕ್ರಿಕೆಟಿಗನಿಗೆ ಪಂತ್ ರೀತಿ ಕಮ್ಬ್ಯಾಕ್ ಮಾಡಬೇಕೆಂದು ಪಾಕಿಸ್ತಾನದ ಮಾಜಿ ಆಟಗಾರ ವಸಿಮ್ ಅಕ್ರಮ್ ರಿಷಭ್ರನ್ನು ಹಾಡಿ ಹೊಗಳಿದ್ದಾರೆ.