Laddu Row| ನಿಮ್ಮ ಪ್ರತಿ ಮಾತಿಗೂ… ಪವನ್​ ಕಲ್ಯಾಣ್​​ ಹೇಳಿಕೆಗೆ ಪ್ರಕಾಶ್​ ರಾಜ್​​ ಖಡಕ್​ ರಿಯಾಕ್ಷನ್​

Pawan Raj
Published on

ಅಮರಾವತಿ: ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದಕ್ಕೆ ವಿಶೇಷ ಮಹತ್ವವಿದ್ದು, ಜನರು ಅದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಭಕ್ತರಿಗೆ ನೀಡಲಾಗುವ ಲಾಡುವನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗುತ್ತಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ವಿಶ್ವವ್ಯಾಪಿ ಸದ್ದು ಮಾಡುತ್ತಿದ್ದು, ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​ ತಿಮ್ಮಪ್ಪನ ಕ್ಷಮೆ ಕೋರಿ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡಿದ್ದಾರೆ.

ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡಿರುವ ಪವನ್​ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದು, ಸ್ವಚ್ಛತಾ ಕಾರ್ಯಕೈಗೊಂಡಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಯಾರೇ ಆಗಲಿ ಶಿಕ್ಷೆಗೆ ಒಳಪಡುತ್ತಾರೆ. ಸನಾತನ ಧರ್ಮ ರಕ್ಷಣಾ ಬೋರ್ಡ್ ಸ್ಥಾಪಿಸಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಹುಭಾಷಾ ನಟ ಪ್ರಕಾಶ್​ ರಾಜ್​ ಆತಂಕವನ್ನು ಹೆಚ್ಚು ಮಾಡಬೇಡಿ ಎಂದು ಹೇಳುವ ಮೂಲಕ ಹೊಸ ವಾಕ್ಸಮರಕ್ಕೆ ನಾಂದಿ ಹಾಡಿದ್ದರು. ಕಾಶ್ ರೈ ಅವರೇ ನೀವು ಪಾಠ ಕಲಿಯಬೇಕಿದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ಪ್ರಕಾಶ್ ರೈ ಮಾತ್ರವಲ್ಲ ಜಾತ್ಯಾತೀತರು ಎಂದು ಹೇಳಿಕೊಳ್ಳುವ ಎಲ್ಲರೂ ಪಾಠ ಕಲಿಯಬೇಕಿದೆ ಎಂದು ಪವನ್​ ಕಲ್ಯಾಣ್​ ತಿರುಗೇಟು ನೀಡಿದ್ದರು.

ಇದೀಗ ನಟ ಪವನ್​ ಕಲ್ಯಾಣ್​ ಆರೋಪಕ್ಕೆ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಪ್ರಕಾಶ್​ ರಾಜ್​, ಪವನ್ ಕಲ್ಯಾಣ್ ಅವರೇ ಈಗಷ್ಟೇ ನಾನು ನಿಮ್ಮ ಪ್ರೆಸ್ ಮೀಟ್ ವಿಡಿಯೋ ನೋಡಿದೆ. ನಾನು ಹೇಳಿದ್ದೇನು ನೀವು ಅದನ್ನು ಹೇಗೆ ಅಪಾರ್ಥ ಮಾಡಿಕೊಂಡು ತಿರುಚುತ್ತಿದ್ದೀರಿ. ನಾನೀಗ ಶೂಟಿಂಗ್​ಗಾಗಿ ವಿದೇಶಕ್ಕೆ ಬಂದಿದ್ದೀನಿ. 30ನೇ ತಾರೀಖಿನ ನಂತರ ಭಾರತಕ್ಕೆ ಬಂದು ನಿಮ್ಮ ಪ್ರತಿ ಮಾತಿಗೂ ಉತ್ತರ ಕೊಡುತ್ತೇನೆ. ಅಲ್ಲಿಯವರೆಗೆ ಸಾಧ್ಯವಾದರೆ ನಾನು ಮಾಡಿದ ಟ್ವೀಟ್ ಏನೆಂಬುದನ್ನು ದಯವಿಟ್ಟು ಇನ್ನೊಮ್ಮೆ ಗಮನಿಸಿ ಎಂದು ಹೇಳಿದ್ದಾರೆ.

ವಾಕ್ಸಮರಕ್ಕೆ ಕಾರಣವೇನು?

ಲಡ್ಡು ವಿವಾದ ತೀವ್ರಗೊಳ್ಳುತ್ತಿದ್ದಂತೆ ಮಾತನಾಡಿದ್ದ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​, ಈಗಾಗಲೇ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದು, ಸನಾತನ ಧರ್ಮ ರಕ್ಷಣಾ ಬೋರ್ಡ್ ಸ್ಥಾಪಿಸಬೇಕಿದೆ ಎಂದು ಆಗ್ರಹಿಸಿ ಟ್ವೀಟ್​ ಮಾಡಿದ್ದರು. ಪವನ್​ ಕಲ್ಯಾಣ್​ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ನಟ ಪ್ರಕಾಶ್​ ರಾಜ್​, ನೀವು ಡಿಸಿಎಂ ಆಗಿರುವ ರಾಜ್ಯದಲ್ಲಿಯೇ ಈ ಘಟನೆ ನಡೆದಿದೆ. ಕೂಡಲೇ ತನಿಖೆ ನಡೆಸಿ, ಯಾರು ತಪ್ಪಿತಸ್ಥರೋ ಅವರ ವಿರುದ್ಧ ಕ್ರಮ ಜರುಗಿಸಿ. ಏಕೆ ನೀವು ಆತಂಕವನ್ನು ಹರಡುತ್ತಿದ್ದೀರಿ, ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುತ್ತಿದ್ದೀರಿ. ಕೇಂದ್ರದಲ್ಲಿರುವ ನಿಮ್ಮ ಗೆಳೆಯರ ಕೃಪೆಯಿಂದ, ಈಗ ದೇಶದಲ್ಲಿ ಇರುವ ಕೋಮುವೈಷಮ್ಯವೇ ಸಾಕಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ಹೊಸ ವಾಕ್ಸಮರಕ್ಕೆ ನಾಂದಿ ಹಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net