ವಾರ್ನರ್ ಟಿಕ್‌ಟಾಕ್‌ಗೆ ಅಭಿಮಾನಿಗಳು ಫಿದಾ!

Untitled-1
Published on

ಬೆಂಗಳೂರು: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಎದುರಾಳಿ ತಂಡಗಳಿಗೆ ಎದೆನಡುಗಿಸುವ ಈ ಆಟಗಾರ ಲಾಕ್‌ಡೌನ್ ಸಮಯದಲ್ಲಿ ಒಬ್ಬ ಅದ್ಭುತ ಟಿಕ್‌ಟಾಕ್ ಕಲಾವಿದರಾಗಿ ಮೂಡಿಬಂದಿದ್ದಾರೆ! ಕರೊನಾ ವೈರಸ್ ಭೀತಿಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿರುವುದರಿಂದ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ವಾರ್ನರ್, ಟಿಕ್‌ಟಾಕ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಪತ್ನಿ ಹಾಗೂ ಮಕ್ಕಳು ಕೂಡ ವಾರ್ನರ್‌ಗೆ ಸಾಥ್ ನೀಡುತ್ತಿದ್ದಾರೆ.

ಐಪಿಎಲ್ ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕನಾಗಿರುವ ವಾರ್ನರ್ ತೆಲುಗು ಅಭಿಮಾನಿಗಳನ್ನು ರಂಜಿಸುವ ಸಲುವಾಗಿ ಟಾಲಿವುಡ್ ಸಿನಿಮಾ ಡೈಲಾಗ್, ಹಾಡುಗಳಿಗೆ ಪತ್ನಿ, ಮಗಳೊಂದಿಗೆ ಟಿಕ್‌ಟಾಕ್ ಮಾಡುತ್ತಿದ್ದಾರೆ. ದೂರದ ಆಸ್ಟ್ರೇಲಿಯಾದಲ್ಲಿದ್ದರೂ ಸನ್‌ರೈಸರ್ಸ್‌ ತಂಡದ ಆರೆಂಜ್ ಜೆರ್ಸಿ ಧರಿಸಿ ಟಿಕ್‌ಟಾಕ್ ಮಾಡಿ ಐಪಿಎಲ್ ಫೀಲ್ ಪಡೆಯಲು ಯತ್ನಿಸುತ್ತಿದ್ದಾರೆ. ವಾರ್ನರ್ ಪತ್ನಿ ಕ್ಯಾಂಡೈಸ್ ಜತೆಗೆ ಮೂವರು ಹೆಣ್ಣು ಮಕ್ಕಳನ್ನೂ ವಿವಿಧ ಟಿಕ್‌ಟಾಕ್‌ಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಜನಪ್ರಿಯ ‘ರಾಮುಲೋ ರಾಮುಲಾ...’ ಹಾಡಿಗೆ ಮಾಡಿರುವ ಟಿಕ್‌ಟಾಕ್ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದರೆ, ಸನ್‌ರೈಸರ್ಸ್‌ ತಂಡದ ಜೆರ್ಸಿ ಧರಿಸಿ 2006ರಲ್ಲಿ ಬಿಡುಗಡೆಯಾದ ಸ್ಟಾರ್ ನಟ ಮಹೇಶ್ ಬಾಬು ನಟನೆಯ ‘ಪೋಕರಿ’ ಸಿನಿಮಾ ಡೈಲಾಗ್ ಎಲ್ಲರ ಗಮನಸೆಳೆದಿದೆ. ಈ ಡೈಲಾಗ್‌ಗೆ ತೆಲುಗು ಭಾಷಿಗರು ವಾರ್ನರ್ ಮೇಲೆ ುಲ್ ಫಿದಾ ಆಗಿದ್ದಾರೆ. ಇದಕ್ಕೂ ಮೊದಲು ‘ಬುಟ್ಟ ಬೊಮ್ಮ..ಬುಟ್ಟ ಬೊಮ್ಮ’ ಹಾಡಿಗೂ ಟಿಕ್‌ಟಾಕ್ ಮಾಡಿ ಗಮನಸೆಳೆದಿದ್ದರು. 2016ರಲ್ಲಿ ವಾರ್ನರ್ ಸಾರಥ್ಯದಲ್ಲಿ ಸನ್‌ರೈಸರ್ಸ್‌ ತಂಡ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿತ್ತು.

ತಮಿಳು ಹಾಡಿಗೆ ಲುಂಗಿ ತೊಟ್ಟ ವಾರ್ನರ್!
ತಮಿಳು ಹಾಡಿಗೂ ಟಿಕ್‌ಟಾಕ್ ಮಾಡಿರುವ ವಾರ್ನರ್, ಲುಂಗಿ ತೊಟ್ಟಿರುವುದ ವಿಶೇಷ. ಸನ್‌ಗ್ಲಾಸ್ ಧರಿಸಿ, ಶಾರ್ಟ್ಸ್ ಮೇಲೆಯೇ ಲುಂಗಿಯಂತೆ ಟವೆಲ್ ಸುತ್ತಿಕೊಂಡಿರುವ ವಾರ್ನರ್ ಜತೆಗೆ ಪತ್ನಿ ಕ್ಯಾಂಡಿಸ್ ಮತ್ತು ಮಕ್ಕಳು ಕೂಡ ತಮಿಳು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮನೆಯಲ್ಲೇ ಇದ್ದು ಬೋರ್ ಆಗುವುದನ್ನು ತಪ್ಪಿಸಲು ಇದು ಒಳ್ಳೆಯ ಉಪಾಯ ಎಂದು ವಾರ್ನರ್ ವಿಡಿಯೋಗೆ ಅಡಿಬರಹ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net