

ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಮುಂದೂಡಿಕೆ ಯಾಗಿದ್ದ ಫಿಫಾ 17 ವಯೋಮಿತಿ ಮಹಿಳೆಯರ ವಿಶ್ವಕಪ್ ಟೂರ್ನಿ ಇದೀಗ ಮರುನಿಗದಿಯಾಗಿದ್ದು, ಮುಂದಿನ ವರ್ಷ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಈ ಮೊದಲಿನ ವೇಳಾಪಟ್ಟಿಯ ಪ್ರಕಾರ ಈ ವರ್ಷ ನವೆಂಬರ್ನಲ್ಲಿ ಭಾರತ ಟೂರ್ನಿಗೆ ಆತಿಥ್ಯ ವಹಿಸಬೇಕಾಗಿತ್ತು. 2003ರ ಜನವರಿ 1ರ ನಂತರ ಮತ್ತು 2005ರ ಡಿಸೆಂಬರ್ 31ಕ್ಕೆ ಮುನ್ನ ಜನಿಸಿದವರು ಟೂರ್ನಿಯಲ್ಲಿ ಆಡಲು ಅರ್ಹರು ಎಂದು ಈ ಹಿಂದೆ ನಿಗದಿಯಾಗಿದ್ದ ಮಾನದಂಡವೇ ಮುಂದುವರಿಯಲಿದೆ ಎಂದು ಫಿಫಾ ತಿಳಿಸಿದೆ.
ಇದನ್ನೂ ಓದಿ: ಕ್ರಿಕೆಟ್ನಲ್ಲೂ ಇದ್ದಾರೆ ಫೆಡರರ್, ನಡಾಲ್!
ಟೂರ್ನಿಯ ಪಂದ್ಯಗಳಿಗೆ ದೇಶದ 5 ನಗರಗಳಾದ ಕೋಲ್ಕತ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ನವಿ ಮುಂಬೈ ಆತಿಥ್ಯ ವಹಿಸಲಿದೆ. ಆತಿಥೇಯ ತಂಡವಾಗಿ ಭಾರತ ಈಗಾಗಲೆ ಟೂರ್ನಿಗೆ ಆತಿಥ್ಯ ವಹಿಸಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ. ಇದು ಭಾರತದಲ್ಲಿ ನಡೆಯಲಿರುವ 2ನೇ ಫಿಫಾ ಟೂರ್ನಿಯಾಗಿದೆ. ಈ ಮುನ್ನ 2017ರಲ್ಲಿ ಪುರುಷರ 17 ವಯೋಮಿತಿ ವಿಶ್ವಕಪ್ ನಡೆದಿತ್ತು.