ಸಿದ್ಧವಾಗಿರಿ... ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ

Modi 12 May 20
Published on

ನವದೆಹಲಿ: ದೇಶದಲ್ಲಿ ಸದ್ಯ ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದ್ದು, ಮೇ 17ಕ್ಕೆ ಅದರ ಅವಧಿ ಮುಕ್ತಾಯವಾಗಲಿದೆ. ಆದರೆ ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಕೊವಿಡ್​-19 ದೇಶಕ್ಕೆ ಕಾಲಿಟ್ಟಾಗಿನಿಂದ ಇಂದು ಐದನೇ ಬಾರಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನಕ್ಕಾಗಿ ಒಟ್ಟು 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.

ಅದರೊಂದಿಗೆ ಲಾಕ್​ಡೌನ್​ ಕೂಡ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ. ಕರೊನಾ ವೈರಸ್​ ಇನ್ನೂ ಸುದೀರ್ಘ ಸಮಯಗಳವರೆಗೆ ನಮ್ಮೊಂದಿಗೇ ಇರಲಿದೆ. ವೈರಸ್​ನೊಂದಿಗೇ ಬದುಕಲು ಕಲಿಯಿರಿ ಎಂದು ಹಲವು ವಿಜ್ಞಾನಿಗಳು, ತಜ್ಞರು ಹೇಳಿದ್ದಾರೆ. ಹಾಗೇ, ಎಲ್ಲ ರಾಜ್ಯಗಳ ಕೊವಿಡ್-19ರ ಪರಿಸ್ಥಿತಿ, ಆರ್ಥಿಕತೆ ಸ್ಥಿತಿಯ ವರದಿಯನ್ನು ಆಯಾ ಮುಖ್ಯಮಂತ್ರಿಗಳಿಂದ ಪಡೆಯಲಾಗಿದೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಲಾಕ್​ಡೌನ್​ ನಾಲ್ಕನೇ ಹಂತವನ್ನು ಕೆಲವು ಹೊಸ ನಿಯಮಗಳೊಂದಿಗೆ ಜಾರಿ ಮಾಡಲಾಗುವುದು. ನಾಲ್ಕನೇ ಹಂತದ ಲಾಕ್​ಡೌನ್ ಹೇಗಿರಲಿದೆ, ಅದರ ರೂಪುರೇಷೆಗಳೇನು ಎಂಬುದನ್ನು ಮೇ 18ಕ್ಕೂ ಮೊದಲೇ ದೇಶದ ಜನರಿಗೆ ತಿಳಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net