ಬಿಸಿಸಿಐಗೆ 4 ಸಾವಿರ ಕೋಟಿ ರೂಪಾಯಿ ನಷ್ಟ?

BCCI 13 May
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯ 13ನೇ ಆವೃತ್ತಿ ನಡೆಯದೇ ಹೋದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೊಡ್ಡ ಮಟ್ಟದ ಹೊಡೆತವನ್ನು ಎದುರಿಸಬೇಕಾಗುತ್ತದೆ. ಕರೊನಾ ಮಹಾಮಾರಿಗೆ ಐಪಿಎಲ್ ಟೂರ್ನಿ ಬಲಿಯಾಗಿಬಿಟ್ಟರೆ ಬಿಸಿಸಿಐಗೆ ಬರೋಬ್ಬರಿ ಅರ್ಧ ಬಿಲಿಯನ್ ಡಾಲರ್ ಅಂದರೆ 4 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಲಿದೆ. ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ಐಪಿಎಲ್ ಟೂರ್ನಿ ವಿವಿಧ ಸವಾಲುಗಳ ನಡುವೆಯೂ ಯಶಸ್ವಿಯಾಗಿ ನಡೆಯುತ್ತ ಬಂದಿತ್ತು. ಹಲವು ವಿವಾದ, ಫಿಕ್ಸಿಂಗ್ ಹಗರಣಗಳು, ಸಾರ್ವತ್ರಿಕ ಚುನಾವಣೆಗಳು ಐಪಿಎಲ್ ಟೂರ್ನಿಯನ್ನು ಕಾಡಿದ್ದರೂ, ಯಾವತ್ತೂ ಟೂರ್ನಿ ನಿಂತಿರಲಿಲ್ಲ. ಆದರೆ ಈ ಬಾರಿ ಮಾರ್ಚ್ 29 ರಂದು ಆರಂಭಗೊಳ್ಳಬೇಕಾಗಿದ್ದ ಟೂರ್ನಿ ಯನ್ನು ಮೊದಲಿಗೆ ಏಪ್ರಿಲ್ 15ರ ವರೆಗೆ ಮುಂದೂಡಲಾಗಿತ್ತು. ಬಳಿಕ ಲಾಕ್​ಡೌನ್ ವಿಸ್ತರಣೆಯ ಬೆನ್ನಲ್ಲೇ ಅನಿರ್ದಿಷ್ಟಾವಧಿಗೆ ಟೂರ್ನಿ ಮುಂದೂಡಲ್ಪಟ್ಟಿದೆ. ಒಂದು ವೇಳೆ ಈ ವರ್ಷ ಟೂರ್ನಿಯನ್ನು ನಡೆಸುವುದು ಸಾಧ್ಯವಾಗದೇ ಹೋದರೆ ಬಿಸಿಸಿಐಗೂ ಆರ್ಥಿಕ ಸಂಕಷ್ಟ ಎದುರಾಗುವುದು ನಿಶ್ಚಿತ. ‘ಬಿಸಿಸಿಐ ಕೂಡ ದೊಡ್ಡ ಮಟ್ಟದ ಆರ್ಥಿಕ ಹೊಡೆತದ ಭೀತಿಯಲ್ಲಿದೆ. ಐಪಿಎಲ್ ನಡೆಯದೇ ಹೋದರೆ ನಮಗೆ 4 ಸಾವಿರ ಕೋಟಿ ರೂ. (530 ದಶಲಕ್ಷ ಡಾಲರ್) ಅಥವಾ ಅದಕ್ಕಿಂತಲೂ ಹೆಚ್ಚಿನ ನಷ್ಟವಾಗಲಿದೆ’ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

ಇತರೆಲ್ಲ ಕ್ರೀಡೆಯಂತೆ ಕ್ರಿಕೆಟ್​ನಲ್ಲೂ ಚಟುವಟಿಕೆಗಳನ್ನು ಪುನರಾರಂಭ ಮಾಡುವುದಕ್ಕೆ ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ. ದೇಶದಲ್ಲಿ ಕರೊನಾ ಹಾವಳಿ ಶುರುವಾದ ಬೆನ್ನಲ್ಲೇ ಮಾರ್ಚ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಅರ್ಧದಲ್ಲೇ ಮೊಟಕುಗೊಂಡಿತ್ತು.

ಪರಿಸ್ಥಿತಿ ಸುಧಾರಿಸಿದರೆ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಐಪಿಎಲ್ ಆಯೋಜಿಸುವ ಚಿಂತನೆ ಬಿಸಿಸಿಐ ವಲಯದಲ್ಲಿದೆ. ಪೂರ್ಣ ಪ್ರಮಾಣದ ಐಪಿಎಲ್​ಗೆ 45-50 ದಿನಗಳ ಕಾಲಾವಕಾಶ ಬೇಕು. ಅಷ್ಟು ದಿನಗಳ ಅವಧಿ ಲಭಿಸುತ್ತದೆಯೇ ಎಂದು ಕಾದುನೋಡಬೇಕಿದೆ ಎಂದಿದ್ದಾರೆ ಧುಮಾಲ್.

ಸ್ಟಾರ್ ಸ್ಪೋರ್ಟ್ಸ್​ಗೂ ನಷ್ಟದ ಭೀತಿ: ಐಪಿಎಲ್ ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ 2017ರಿಂದ 5 ವರ್ಷಗಳಿಗೆ 1,657 ಕೋಟಿ ರೂ.ಗಳಿಗೆ ಪಡೆದುಕೊಂಡಿತ್ತು. ಈ ವರ್ಷದ ಟೂರ್ನಿಯ ಜಾಹೀರಾತುಗಳಿಂದ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ, ಬರೋಬ್ಬರಿ 3 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿತ್ತು. ಐಪಿಎಲ್ ರದ್ದಾದರೆ ಸ್ಟಾರ್ ಸ್ಪೋರ್ಟ್ಸ್​ಗೂ ದೊಡ್ಡ ಮೊತ್ತದ ನಷ್ಟ ಉಂಟಾಗಲಿದೆ. -ಏಜೆನ್ಸೀಸ್

50: ಕಳೆದ ವರ್ಷದ ಡಫ್ ಆಂಡ್ ಫೆಲ್ಪ್ಸ್​​ ವಿತ್ತ ಸಲಹಾಕಾರರ ವರದಿಯ ಪ್ರಕಾರ ಐಪಿಎಲ್​ನ ಬ್ರ್ಯಾಂಡ್ ಮೌಲ್ಯ 50.5 ಸಾವಿರ ಕೋಟಿ ರೂಪಾಯಿ (6.7 ಶತಕೋಟಿ ಡಾಲರ್) ಆಗಿದೆ.

ಕರೊನಾ ನಿಗ್ರಹವಾದರೆ ಲಂಕಾ ಪ್ರವಾಸ

ಹಾಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ ಟೀಮ್ ಇಂಡಿಯಾ, ಜೂನ್​ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಾಗಿದೆ. ಆದರೆ ಕರೊನಾ ನಿಗ್ರಹವಾದರೆ ಮಾತ್ರ ಈ ಪ್ರವಾಸ ಕೈಗೊಳ್ಳ ಲಾಗುವುದು. ಕ್ರಿಕೆಟಿಗರ ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಯಾವುದೇ ಅನುಮಾನವಿದ್ದರೂ ಪ್ರವಾಸ ರದ್ದುಗೊಳಿಸಲು ಹಿಂದೇಟು ಹಾಕುವುದಿಲ್ಲ ಎಂದು ಧುಮಾಲ್ ತಿಳಿಸಿದ್ದಾರೆ.

ನಷ್ಟದ ಪ್ರಮಾಣ ತಿಳಿದರೆ ವೇತನ ಕಡಿತ

ಕರೊನಾದಿಂದಾಗಿ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡ ಕಾರಣ ಈಗಾಗಲೆ ಹಲವು ದೇಶಗಳ ಕ್ರಿಕೆಟ್ ಮಂಡಳಿಗಳು ಸಿಬ್ಬಂದಿ ಮತ್ತು ಆಟಗಾರರ ವೇತನ ಕಡಿತ ಮಾಡಿವೆ. ಆದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಮಾತ್ರ ಸದ್ಯಕ್ಕೆ ಅಂಥ ಯೋಚನೆ ಇಲ್ಲ ಎಂದಿದೆ. ‘ವೇತನ ಕಡಿತ ನಮಗೆ ಕೊನೆಯ ಆಯ್ಕೆ ಆಗಿರುತ್ತದೆ. ಕರೊನಾದಿಂದಾಗಿ ನಮಗೆ ಅಂತಿಮವಾಗಿ ಎಷ್ಟು ನಷ್ಟವಾಗಲಿದೆ ಎಂಬುದು ಗೊತ್ತಿಲ್ಲ. ನಷ್ಟದ ಪ್ರಮಾಣ ಗೊತ್ತಾದರೆ ವೇತನ ಕಡಿತದ ಬಗ್ಗೆ ಯೋಚಿಸಬಹುದು’ ಎಂದು ಧುಮಾಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net