More

    ಕರೊನಾ ಸೋಂಕಿತ ನೆಲೆಸಿದ್ದ ಶಿಬರದಿನ್ನಿಯ ಎಡಭಾಗ ಕಂಪ್ಲೀಟ್ ಸೀಲ್ ಡೌನ್

    ಕಂಪ್ಲಿ: ಕರೊನಾ ಸೋಂಕಿತ ಗಾರೆ ಕೆಲಸಗಾರ ನೆಲೆಸಿದ್ದ ಶಿಬರದಿನ್ನಿಯ ಎಡಭಾಗವನ್ನು ಮುಂಜಾಗ್ರತಾಕ್ರಮವಾಗಿ ಕಂಟೈನ್‌ಮೆಂಟ್ ಜೋನ್ ರೂಪಿಸಿ ಸೀಲ್ ಡೌನ್ ಮಾಡಲಾಗಿದೆ.

    ಈ ಪ್ರದೇಶದಲ್ಲಿ ಮಂಗಳವಾರ ಜನತೆಯ ಆರೋಗ್ಯ ತಪಾಸಿಸಲಾಯಿತು. ತಾಲೂಕು ವೈದ್ಯಾಧಿಕಾರಿ ಭಾಸ್ಕರ ಮಾತನಾಡಿ, ಕರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಪತ್ನಿ, ತಾಯಿ, ಅಂಗನವಾಡಿ ಸಹಾಯಕಿ, ಆಶಾ ಕಾರ್ಯಕರ್ತೆ, ಕಿರಾಣಿ ಅಂಗಡಿ ಮಾಲೀಕ, ಹೋಟೆಲ್ ಮಾಲೀಕ ಸೇರಿ ಒಟ್ಟು ಆರು ಜನರನ್ನು ಹೊಸಪೇಟೆಯ ಸಾಂಸ್ಥಿಕ ದಿಗ್ಬಂಧನದಲ್ಲಿರಿಸಲಾಗಿದೆ. ಸೋಂಕಿತನು ಮೇ 7 ಮತ್ತು 9ನೇ ತಾರೀಖಿನ ದಿನ ಎರಡು ಬಾರಿ ಕಂಪ್ಲಿಯಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾನೆ. ಸೋಂಕಿತನ ಸಂಪರ್ಕ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸೋಂಕಿತನ ಪತ್ನಿಯ ಕರೊನಾ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ಇಬ್ಬರು ಮೇಲ್ವಿಚಾರಕರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು ನಾಲ್ಕು ತಂಡಗಳನ್ನು ರಚಿಸಿದ್ದು, ಕಂಟೈನ್‌ಮೆಂಟ್‌ನ ಜನತೆಯ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. 28ದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಇಲ್ಲಿನ ಯಾರೊಬ್ಬರಿಗಾದರೂ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಲ್ಲಿ ಕೂಡಲೇ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿ ತಪಾಸಿಸಕೊಳ್ಳಬೇಕು ಎಂದು ಹೇಳಿದರು.

    ಸಿಪಿಐ ಡಿ.ಹುಲುಗಪ್ಪ ಮಾತನಾಡಿ, ಕಂಟೈನ್‌ಮೆಂಟ್ ಸುತ್ತಲೂ ಆರು ಚೆಕ್‌ಪೋಸ್ಟ್ ರಚಿಸಲಾಗಿದ್ದು, ಮೂರು ಪಾಳಿಯಂತೆ ಕರ್ತವ್ಯ ನಿರ್ವಹಿಸಲಾಗುವುದು ಎಂದು ಹೇಳಿದರು. ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಕಂಟೈನ್‌ಮೆಂಟ್‌ನಲ್ಲಿ 183 ಮನೆಗಳಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಇವರಿಗೆ ದಿನಸಿ, ತರಕಾರಿ, ಹಾಲು ಮೊಸರು ಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು. ಬ್ಯಾರಿಕೇಡ್ ನಿರ್ಮಿಸಿ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದು, ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸಲಾಗಿದೆ ಎಂದರು.

    ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಡಿವೈಎಸ್‌ಪಿ ವಿ.ರಘುಕುಮಾರ್ ಕಂಟೈನ್‌ಮೆಂಟಿಗೆ ಭೇಟಿ ನೀಡಿದ್ದರು. ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ, ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ, ಡಾ.ಮಲ್ಲೇಶಪ್ಪ, ಧರ್ಮನಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್.ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಸೇರಿ ಆರೋಗ್ಯ, ಕಂದಾಯ, ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ಕಂಟೈನ್‌ಮೆಂಟಿನಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts