

ನವದೆಹಲಿ: ಲಾಕ್ಡೌನ್ ಜಾರಿಯಿಂದಾಗಿ ವಿವಿಧ ದೇಶಗಳಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ವಂದೇ ಭಾರತ್ ಮಿಷನ್ನ ಎರಡನೇ ಹಂತದ ಕಾರ್ಯಾಚರಣೆ ಮೇ 16 ಮೇ 22 ರ ಮಧ್ಯೆ ನಡೆಯಲಿದೆ.
31 ದೇಶಗಳಲ್ಲಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಫೀಡರ್ ವಿಮಾನ ಸೇರಿದಂತೆ 149 ವಿಮಾನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ ಸರ್ಕಾರ ಎರಡು ಹಂತದ ಕಾರ್ಯಾಚರಣೆಯನ್ನು ಘೋಷಿಸಿತ್ತು.
ಈಗ ಸರ್ಕಾರ ಅಮೆರಿಕಕ್ಕೆ 13 ವಿಮಾನಗಳು, ಯುಕೆಗೆ 9, ಕೆನಡಾಕ್ಕೆ 10, ಯುಎಇಗೆ 11, ಸೌದಿ ಅರೆಬಿಯಾಗೆ 9, ರಷ್ಯಾಗೆ 6 ಮತ್ತು ಆಸ್ಟ್ರೇಲಿಯಾಗೆ 7 ವಿಮಾನಗಳ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ. ಫ್ರಾನ್ಸ್, ಇಟಲಿ, ಜರ್ಮನಿ, ಐರ್ಲೆಂಡ್ ಮತ್ತು ಆಗ್ನೇಯ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಿಗೂ ವಿಮಾನ ವ್ಯವಸ್ಥೆ ಮಾಡಲಿದೆ.
ಮೇ 7 ರಂದು ಕಾರ್ಯಾಚರಣೆಯ ಮೊದಲ ದಿನ 2300 ಭಾರತೀಯರನ್ನು ಮರಳಿ ತರಲು ಹತ್ತು ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕೆಲ ದಿನಗಳ ನಂತರ ಯುಎಇಗೆ 10, ಅಮೆರಿಕ ಹಾಗೂ ಯುಕೆಗೆ ತಲಾ 7, ಸೌದಿ ಅರೆಬಿಯಾಗೆ 5, ಸಿಂಗಾಪುರಕ್ಕೆ 5, ಕತಾರ್ಗೆ 2 ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು.
ಕಳೆದ ವಾರ ಆರಂಭವಾದ ಮೊದಲ ಹಂತದ ಐದು ದಿನಗಳ ಕಾರ್ಯಾಚರಣೆಯಲ್ಲಿ ಅಮೆರಿಕ, ಯುಕೆ, ಆಗ್ನೇಯ ಏಷ್ಯಾ, ಕೊಲ್ಲಿಯ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಕರೆತರಲಾಗಿದೆ.
ಕೊಲ್ಲಿ ಯುದ್ಧದ ನಂತರ ಕೇಂದ್ರ ಸರ್ಕಾರ ವಾಣಿಜ್ಯ ಜೆಟ್ ವಿಮಾನ, ಮಿಲಿಟರಿ ವಿಮಾನಗಳು ಹಾಗೂ ಯುದ್ಧ ವಿಮಾನಗಳನ್ನು ಈ ಅತಿದೊಡ್ಡ ವಾಪಸಾತಿ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದೆ.