

ಐಪಿಎಲ್ 17ನೇ ಆವೃತ್ತಿಯ ಪ್ರತಿಯೊಂದು ಪಂದ್ಯವು ದಿನದಿಂದ ದಿನಕ್ಕೆ ಬಹಳ ರೋಚಕವಾಗಿ ಮೂಡಿಬರುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಕೌತುಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾರ್ಚ್ 22ರಂದು ಆರಂಭವಾದ ಈ ಸೀಸನ್ನ ಮೊದಲ ಪಂದ್ಯದಲ್ಲಿ ಸೋಲಿನಿಂದಲೇ ಲೀಗ್ ಪ್ರಾರಂಭಿಸಿದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ ಇದೀಗ ನಿನ್ನೆಯ (ಮೇ.04) ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ ನೇರವಾಗಿ 7ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ತಮ್ಮ ಪ್ಲೇ-ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿದೆ.
ನಿನ್ನೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಫಾಫ್ ಪಡೆ 4 ವಿಕೆಟ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಹೆಚ್ಚಿನ ಅಂತರದಲ್ಲಿ ಶುಭಮನ್ ಗಿಲ್ ಪಡೆಯನ್ನು ಮಣಿಸಿದ ಆರ್ಸಿಬಿಗೆ ಇದೊಂದೇ ಒಂದು ಪಂದ್ಯದಿಂದ ಅಧಿಕ ಅಂಕಗಳು ಲಭಿಸಿತು. ಇದರ ಸಹಾಯದಿಂದ ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ 7ನೇ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಈ ಸೀಸನ್ನಲ್ಲಿ ಎರಡು ಪ್ರತ್ಯೇಕ ತಂಡಗಳ ನೂತನ ಕ್ಯಾಪ್ಟನ್ಗಳು ತಮ್ಮ ತಂಡವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಎಡವುತ್ತಿದ್ದು, ಅದರಿಂದ ಹೊರಬರಲು ಒದ್ದಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ತಮ್ಮ ತಂಡಗಳಿಗೆ ನಿಯೋಜನೆ ಮಾಡಲಾದ ಹೊಸ ಯುವ ಕ್ಯಾಪ್ಟನ್ಗಳು. ಸದ್ಯ ಈ ಲೀಗ್ನಲ್ಲಿ ಇವರಿಬ್ಬರು ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದ್ದಾರೆ.
ಸದ್ಯ ನಿನ್ನೆಯ ಪಂದ್ಯವನ್ನು ಗಮನಿಸಿ ಮಾತನಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಶುಭಮನ್ ಗಿಲ್ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಶುಭಮನ್ ಕಡೆಯಿಂದ ಇದು ಕಳಪೆ ಕ್ಯಾಪ್ಟನ್ಸಿ. ಅವರು ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಎಂಬುದು ಗ್ರೌಂಡ್ನಲ್ಲಿ ಕಾಣಿಸಲಿಲ್ಲ. ಅದಕ್ಕೆ ಕಾರಣ, ಸಂಪೂರ್ಣ ಆಟವನ್ನೇ ಆರ್ಸಿಬಿಗೆ ಬಿಟ್ಟುಕೊಟ್ಟಿದ್ದು. ಪವರ್ಪ್ಲೇನಲ್ಲಿ ನೂರ್ ಅಹ್ಮದ್ ಮತ್ತು ರಶೀದ್ ಖಾನ್ರನ್ನು ತರಬಹುದಿತ್ತು. ಆದರೆ, ಗಿಲ್ ಅದನ್ನೂ ಸಹ ಮಾಡಲಿಲ್ಲ" ಎಂದು ಜಿಟಿ ನಾಯಕನ ಬಗ್ಗೆ ಸೆಹ್ವಾಗ್ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).