

ನವದೆಹಲಿ: ಭಾರತೀಯ ಕ್ರಿಕೆಟ್‌ನ ಐಕಾನ್ ಆಗಿರುವ ವಿರಾಟ್ ಕೊಹ್ಲಿಗೆ ಅಸಂಖ್ಯಾತ ಅಭಿಮಾನಿಗಳಿರುವುದು ನಿಮಗೆಲ್ಲ ತಿಳಿದೇ ಇದೆ. ಕೊಹ್ಲಿ ಅವರನ್ನು ಅನೇಕರು ತುಂಬು ಹೃದಯದಿಂದ ಸದಾ ಆರಾಧಿಸುತ್ತಿರುತ್ತಾರೆ. ಇತ್ತೀಚೆಗೆ ಗುಜರಾತಿನ ಸೂರತ್ ಮೂಲದ ಉದ್ಯಮಿ ಒಬ್ಬರು ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ನಿರ್ಧಾರ ಮಾಡಿದ್ದಾರೆ.
ಹೌದು, 1.04 ಕ್ಯಾರೆಟ್ ಡೈಮಂಡ್ನಿಂದ ತಯಾರಿಸಲಾಗುವ ಬ್ಯಾಟ್ ಅನ್ನು ಕೊಹ್ಲಿಗೆ ಉಡುಗೊರೆಯಾಗಿ ನೀಡಲು ಉದ್ಯಮಿ ಮುಂದಾಗಿದ್ದಾರೆ. ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪಾಲಿಗೆ ಕೊಹ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಲ್ಲಿದ್ದಾರೆ. ಉದ್ಯಮಿ ಕೊಹ್ಲಿಗೆ ಉಡುಗೊರೆಯಾಗಿ ನೀಡಲು ಸಿದ್ಧವಾಗಿರುವ ಡೈಮಂಡ್ ಬ್ಯಾಟ್ ಅನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಂಡಿತು. ವಜ್ರದ ಉದ್ಯಮಿ ಕ್ರಿಕೆಟ್ ಅಭಿಮಾನಿಯಾಗಿದ್ದು, ವಿರಾಟ್ ಕ್ರಿಕೆಟ್ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಹೊರ ಹೊಮ್ಮುವ ಮುಂಚಿನಿಂದಲೇ ಅವರನ್ನು ಉದ್ಯಮಿ ಅನುಸರಿಸುತ್ತಾ ಬಂದಿದ್ದಾರೆ.
ಡೈಮಂಡ್ ಬ್ಯಾಟ್ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಮತ್ತು ಬ್ಯಾಟ್‌ನ ರೇಂಜ್ 15 ಎಂಎಂ ನಿಂದ 5 ಎಂಎಂ ವರೆಗೆ ಇರಲಿದೆ. ವಿಶ್ವಕಪ್ಗೂ ಮುನ್ನ ಈ ಬ್ಯಾಟ್ ಅನ್ನು ವಿರಾಟ್ ಅವರಿಗೆ ಉದ್ಯಮಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಬ್ಯಾಟ್ ನೀಡಲಿರುವ ಉದ್ಯಮಿಯ ಹೆಸರು ಉತ್ಪಾಲ್ ಮಿಸ್ತ್ರಿ. ಇವರು ಡೈಮಂಡ್ ಟೆಕ್ನಾಲಜಿ ತಜ್ಞ ಮತ್ತು ಸೂರತ್‌ನಲ್ಲಿರುವ ಲೆಕ್ಸಸ್ ಸಾಫ್ಟ್‌ಮ್ಯಾಕ್ ಕಂಪನಿಯ ನಿರ್ದೇಶಕ. ಡೈಮಂಡ್ ಬ್ಯಾಟ್ ತಯಾರಿಸಲಾಗಿದ್ದು, ಅದನ್ನು ಪ್ರಮಾಣೀಕರಣಕ್ಕಾಗಿ ಕಳುಹಿಸಲಾಗಿದೆ. ಇದಾದ ಬಳಿಕ ಕೊಹ್ಲಿ ಅವರಿಗೆ ಉತ್ಪಾಲ್ ಮಿಸ್ತ್ರಿ ಅವರು ಬ್ಯಾಟ್ ಅನ್ನು ನೀಡಲಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶುಕ್ರವಾರ (ಆ.18) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷ ಪೂರೈಸಿದರು. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್ಮನ್ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. (ಏಜೆನ್ಸೀಸ್)