

ಮಂಡ್ಯ: ರಾತ್ರೋರಾತ್ರಿ ಪೆಟ್ರೋಲ್ ಬಂಕ್ಗೆ ನುಗ್ಗಿದ ದುಷ್ಕರ್ಮಿಗಳು ಪಂಪ್ನಿಂದ ಪೆಟ್ರೋಲ್ ಹೊರಬಿಟ್ಟು, ಸುಮಾರು 10 ಲಕ್ಷ ರೂ. ಮೌಲ್ಯದ ಇಂಧನ ವ್ಯರ್ಥ ಮಾಡುವ ಮೂಲಕ ಅಟ್ಟಹಾಸವನ್ನು ಮೆರೆದಿದ್ದಾರೆ.
ಈ ಘಟನೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿಯ ಇಂಡಿಯನ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಬಂಕ್ನ ಸಿಬ್ಬಂದಿ, ರಾತ್ರಿ ಊಟಕ್ಕೆ ತೆರಳಿದ ಸಮಯದಲ್ಲಿ ಬಂಕ್ಗೆ ನುಗ್ಗಿದ ದುಷ್ಕರ್ಮಿಗಳು ಜನರೇಟರ್ ಆನ್ ಮಾಡಿ, ಪೆಟ್ರೋಲ್ ಹಾಗೂ ಡೀಸೆಲ್ ಪಂಪ್ ಓಪನ್ ಮಾಡಿ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.
ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್ನಲ್ಲಿ ಕಿಡಿಗೇಡಿಗಳು ಈ ಅಟ್ಟಹಾಸ ಮೆರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಪೆಟ್ರೋಲ್ ಬಂಕ್ ಶುರುಮಾಡಿದ್ದರು. ಸುಮಾರು 10 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸೆಲ್, ರಸ್ತೆಗೆ ಹರಿದು ಹೋಗಿದೆ.
ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗೂ ಎರಡು ಸಾವಿರ ಲೀಟರ್ ಡೀಸೆಲ್ ಸಂಪೂರ್ಣ ನಾಶವಾಗಿದೆ. ಸ್ವಲ್ಪ ಬೆಂಕಿ ಹಚ್ಚಿದರೂ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)