ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

Modi xi jinping
Published on

ನವದೆಹಲಿ: ಇಂದಿನಿಂದ ದಕ್ಷಿಣ ಆಫ್ರಿಕದ ಜೋಹಾನ್ಸ್​ಬರ್ಗ್​ನಲ್ಲಿ ಬ್ರಿಕ್ಸ್​ ಶೃಂಗಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ದ್ವಿಪಕ್ಷೀಯ ಸಭೆಗಳು ಸಹ ಅಂತಿಮಗೊಳಿಸಲಾಗುತ್ತಿದೆ ಎಂಬುದನ್ನು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅ​ವರು ಖಚಿತಪಡಿಸಿದ್ದಾರೆ. ಆದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭೇಟಿಯಾಗುವ ಸಾಧ್ಯತೆ ಇದೆಯಾ ಎಂಬುದನ್ನು ಕ್ವಾತ್ರಾ ಅವರು ಪ್ರತಿಕ್ರಿಯೆ ನೀಡಿಲ್ಲ.

ಕರೊನಾ ಸಾಂಕ್ರಾಮಿಕ ರೋಗದ ನಂತರ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ನ ಮೊದಲ ವೈಯಕ್ತಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಮಂಗಳವಾರ ದಕ್ಷಿಣ ಆಫ್ರಿಕಾದ ನಗರಕ್ಕೆ ತೆರಳುತ್ತಿದ್ದಾರೆ. ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಮಾತುಕತೆ ನಡೆಸುತ್ತಾರೆಯೇ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ, ಪ್ರಧಾನಿಯವರ ದ್ವಿಪಕ್ಷೀಯ ಸಭೆಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದರು. ಆದರೆ, ನೇರವಾಗಿ ಪ್ರತಿಕ್ರಿಯೆ ನೀಡಲಿಲ್ಲ.

ಒಂದು ವೇಳೆ ದ್ವಿಪಕ್ಷೀಯ ಸಭೆ ನಡೆದರೆ 2020ರ ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ಗಡಿ ಬಿಕ್ಕಟ್ಟು ಪ್ರಾರಂಭವಾದ ನಂತರ ಇದು ಅವರ ಮೊದಲನೆ ಭೇಟಿಯಾಗಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಕ್ಸಿ ಔತಣಕೂಟದಲ್ಲಿ ಸಂಕ್ಷಿಪ್ತವಾಗಿ ಭೇಟಿಯಾದರು. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕ್ಸಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಚೀನಾ ಈಗಾಗಲೇ ಘೋಷಿಸಿದೆ.

ಇದೇ ಸಂದರ್ಭದಲ್ಲಿ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪಿಎಲ್‌ಎ ಸ್ಥಳೀಯ ಕಮಾಂಡರ್‌ಗಳ ನಡುವೆ ಬಿಕ್ಕಟ್ಟು ಪರಿಹಾರಕ್ಕೆ ವಿಶ್ವಾಸಯುತ ಮಾತುಕತೆ ಮುಂದುವರೆದಿದೆ.

ಪೂರ್ವ ಲಡಾಖ್‌ನಲ್ಲಿ ಕೆಲವು ಘರ್ಷಣೆಯ ಕೇಂದ್ರದಲ್ಲಿ ಭಾರತ ಮತ್ತು ಚೀನಾದ ಪಡೆಗಳು ಮೂರು ವರ್ಷಗಳಿಂದ ನಿರಂತರ ಘರ್ಷಣೆಯಲ್ಲಿ ಸಿಲುಕಿಕೊಂಡಿದ್ದವು. ಆದರೆ, ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಉಭಯ ದೇಶಗಳು ಹಲವಾರು ಪ್ರದೇಶಗಳಿಂದ ಘರ್ಷಣೆ ಭೀತಿಯಿಂದ ಮುಕ್ತವಾಗಿವೆ. ಭಾರತ ಮತ್ತು ಚೀನಾ ಆಗಸ್ಟ್ 13 ಮತ್ತು 14 ರಂದು 19ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ನಡೆಸಿದ್ದು, ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಸ್ಟ್ಯಾಂಡ್‌ಆಫ್ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿದೆ.

ಇದರ ನಡುವೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಶ್ನೆಗೆ ಬ್ರಿಕ್ಸ್​ ಶೃಂಗಸಭೆ ಉತ್ತರ ನೀಡಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net