

ಸಾಮಾಜಿಕ ಜಾಲತಾಣಗಳ ದುರ್ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಠಿಣ ನಿಲುವು ತಾಳಿರುವುದು ಒಳ್ಳೆಯ ಬೆಳವಣಿಗೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಇಲ್ಲವೇ ಚಾರಿತ್ರ್ಯಹರಣ ಮಾಡುವಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಬೇಷರತ್ ಕ್ಷಮೆ ಕೇಳಿ ಪೋಸ್ಟ್ ಹಿಂತೆಗೆದುಕೊಂಡರೂ ಕ್ರಿಮಿನಲ್ ಮೊಕದ್ದಮೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಚಾರಿತ್ರ್ಯಹರಣ ಮಾಡುವ ಇಲ್ಲವೇ ಸಮಾಜದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುವಂತಹ ಪೋಸ್ಟ್ಗಳನ್ನು ಹಾಕಿದವರು ಶಿಕ್ಷೆಗೆ ಗುರಿಯಾದರೆ ದುರುದ್ದೇಶದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರಿಗೆ ಪಾಠ ಕಲಿಸಿದಂತಾಗಲಿದೆ. ತಮಿಳುನಾಡು ಶಾಸಕ, ನಟ ಶೇಖರ್ ಪ್ರಕರಣದಲ್ಲಿ ಎಚ್ಚರಿಕೆ ನೀಡಿರುವ ಸುಪ್ರೀಂಕೋರ್ಟ್, ಯಾವುದೇ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುನ್ನ ಸಾಧಕ-ಬಾಧಕ ಪರಿಶೀಲನೆ ಮಾಡಬೇಕು. ತಪ್ಪಾಗಿದೆ ಎಂದು ಪೋಸ್ಟ್ ಹಿಂತೆಗೆದುಕೊಂಡಾಕ್ಷಣ ಸಂಬಂಧಪಟ್ಟ ಪೋಸ್ಟ್ನಿಂದ ಆಗಿರುವ ಹಾನಿಯನ್ನು ಭರಿಸಲು ಸಾಧ್ಯವಿಲ್ಲ. ಪೋಸ್ಟ್ ಡಿಲೀಟ್ ಮಾಡಿದರೂ ಕ್ರಿಮಿನಲ್ ಮೊಕದ್ದಮೆ ಎದುರಿಸಲೇಬೇಕು ಎಂದು ಹೇಳಿರುವುದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು ಎನ್ನಬಹುದು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ಚಾರಿತ್ರ್ಯಹರಣ ಮಾಡುವಂಥ ಪೋಸ್ಟ್ಗಳನ್ನು ಹಾಕುವುದು ಸಾಮಾನ್ಯವಾಗುತ್ತಿದೆ. ಹಾಗೂ ಅತಿ ಹೆಚ್ಚು ಜನರನ್ನು ತಲುಪಲಿ ಎಂದು ಶೇರ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಆಧಾರರಹಿತ ಅಥವಾ ಅರೆಬರೆ ಮಾಹಿತಿ ಅಧರಿಸಿದ ಇಲ್ಲವೇ ಮೂಲ ವಿಷಯವನ್ನು ತಿರುಚಿ ಮಾಡುವ ಪೋಸ್ಟ್ಗಳು ಕೆಟ್ಟ ಪರಿಣಾಮವನ್ನು ಬೀರುವುದರಲ್ಲಿ ಸಂದೇಹವೇ ಇಲ್ಲ.
ಸಾರ್ವಜನಿಕ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡವರನ್ನು ಗುರಿಯಾಗಿಸಿಕೊಂಡು ಸದಭಿರುಚಿಯಲ್ಲದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಸಾಮಾನ್ಯ ಎನ್ನುವಂತಾಗಿದ್ದು, ಈ ಪ್ರವೃತ್ತಿ ದಿನೇದಿನೇಹೆಚ್ಚತೊಡಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳು ಆರೋಗ್ಯಪೂರ್ಣವಾಗಿರದೆ ಚಾರಿತ್ರ್ಯವನ್ನೇ ಗುರಿಯಾಗಿಟ್ಟು ದಾಳಿ ಮಾಡಲಾಗುತ್ತಿದೆ. ಇಂಥ ಮನೋಭಾವ ಹೊಂದಿದವರು ಬೇನಾಮಿ ಖಾತೆಗಳನ್ನು ತೆರೆದು ಸಲ್ಲದ ಭಾಷೆಯಲ್ಲಿ ಪೋಸ್ಟ್ ಮಾಡುತ್ತಾರೆ. ರಾಜ್ಯದಲ್ಲಿನ ಈಚೆಗಿನ ಪ್ರಕರಣವನ್ನೇ ಉದಾಹರಿಸಬಹುದಾದರೆ ಗಣ್ಯರೊಬ್ಬರ ಚಾರಿತ್ರ್ಯಹರಣ ಮಾಡುವಂಥ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು ಈ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
ತಂತ್ರಜ್ಞಾನ ಕ್ಷೇತ್ರದಲ್ಲೂ ಅಗಾಧ ಬೆಳವಣಿಗೆಗಳಾಗುತ್ತಿವೆ. ಇಂಟರ್ನೆಟ್ ಸೇವೆ ಸುಲಭವಾಗಿ ಕೈಗೆಟುಕುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮಣಿಪುರ ಹಿಂಸಾಚಾರ ಪ್ರಕರಣ ವ್ಯಾಪಕವಾಗಲು ಇಲ್ಲವೇ ತಕ್ಷಣ ನಿಯಂತ್ರಣಕ್ಕೆ ಬಾರದಿರಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ತಪು್ಪ ಮಾಹಿತಿಗಳೇ ಕಾರಣ ಎಂದು ಪತ್ರಿಕೆಗಳ ವರದಿಗಳು ಹೇಳುತ್ತಿವೆ. ಇದೇ ಕಾರಣಕ್ಕೆ ಸರ್ಕಾರ, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವಂಥ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ಇಂಥ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣದ ದುರ್ಬಳಕೆ ತಡೆಗೆ ಸುಪ್ರೀಂ ಕೋರ್ಟ್ ಹೇಳಿರುವಂತೆ ಕ್ರಮ ಅನಿವಾರ್ಯ. ಕ್ರಿಮಿನಲ್ ಮೊಕದ್ದಮೆ ಎದುರಿಸುವ ಪರಿಸ್ಥಿತಿ ಬಂದರೆ ದುರುದ್ದೇಶದ ಅಥವಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂಥ ಪೋಸ್ಟ್ಗಳಿಗೆ ಕಡಿವಾಣ ಬೀಳಬಹುದು.