

ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದ್ವಿತೀಯಾರ್ಧದಲ್ಲಿ ಯಾರೂ ಊಹಿಸಲಾರದ ಪ್ರದರ್ಶನ ನೀಡಿ, ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ರೋಚಕವಾಗಿ ಎಂಟ್ರಿ ಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್ಬ್ಯಾಕ್ ಎಂದರೆ ತಪ್ಪಾಗಲಾರದು.
ಇನ್ನು ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಆರ್ಸಿಬಿ, ಅಭಿಮಾನಿಗಳ ಕಪ್ ಕನಸನ್ನು ಈ ಬಾರಿಯೂ ಕನಸಾಗಿಯೇ ಉಳಿಸಿತು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಅತೀವ ನೋವುಂಟುಮಾಡಿತು. ಈ ವಿಷಯವನ್ನು ಮುಂದಿಟ್ಟು ಮಾತನಾಡಿದ ಮಾಜಿ ಕ್ರಿಕೆಟಿಗರು, ಆರ್ಸಿಬಿ ಆಟಗಾರರನ್ನು ಮತ್ತು ಫ್ರಾಂಚೈಸಿಯನ್ನು ವ್ಯಂಗ್ಯವಾಡಿದ್ದರು. ಇದೀಗ ಚಾಲೆಂಜರ್ಸ್ ಬಗ್ಗೆ ಟೀಂ ಇಂಡಿಯಾದ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ ಧ್ವನಿ ಎತ್ತಿದ್ದು, 2025ರಲ್ಲಿ ಆರ್ಸಿಬಿಗೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಎಂದು ಹೇಳಿದ್ದಾರೆ.
"ಆರ್ಸಿಬಿ ಫ್ರಾಂಚೈಸಿ ತಮ್ಮ ತಂಡದಲ್ಲಿ ಮೊದಲು ಉಳಿಸಿಕೊಳ್ಳುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಕೇವಲ ರಿಟೈನ್ ಮಾಡಿಕೊಂಡರೆ ಸಾಲದು, ಆರ್ಸಿಬಿಯ ಕ್ಯಾಪ್ಟನ್ ಆಗಿ ಕೊಹ್ಲಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ಆಗ ಫ್ರಾಂಚೈಸಿಗೂ ಒಂದು ಬಲ ಬರುತ್ತದೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು 'ರನ್ ಮಷಿನ್' ತೆಗೆದುಕೊಂಡರೆ ಉತ್ತಮ. ಇಲ್ಲದಿದ್ದರೆ, ಫ್ರಾಂಚೈಸಿಯವರು ಹೊಸ ನಾಯಕನಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ" ಎಂದರು.
ಇದನ್ನೂ ಓದಿ: ಮದ್ಯಪಾನ, ಮಾರಾಟ ನಿಷೇಧ
"2025ರಲ್ಲಿ ನಡೆಯುವ ಐಪಿಎಲ್ 18ನೇ ಸೀಸನ್ಗೆ ತಂಡದಿಂದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಅಲ್ಜಾರಿ ಜೋಸೆಫ್ ಮತ್ತು ಲಾಕೀ ಫೆರ್ಗಸನ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಕೈಬಿಡಲಿದೆ. ಫಾಫ್ ಕೂಡ ಹಿರಿಯರಾಗುತ್ತಿದ್ದಾರೆ. ಅವರನ್ನು ಟೀಮ್ನಿಂದ ಬಿಡುವುದು ಬಹುತೇಕ ಖಚಿತ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ,(ಏಜೆನ್ಸೀಸ್).