

ಜೈಪುರ: ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ 17ನೇ ಆವೃತ್ತಿಯ 19ನೇ ಐಪಿಎಲ್ ಪಂದ್ಯದಲ್ಲಿ ಆರ್ಆರ್ ವಿರುದ್ಧ ಆರ್ಸಿಬಿ ಸೋತರೂ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಹಲವು ದಾಖಲೆಗಳನ್ನು ಬರೆಯಲಾಗಿದೆ. ಇದೀಗ ವಿರಾಟ್ ಕೊಹ್ಲಿ ಅಲ್ಲದೇ ಆರ್ಸಿಬಿ ತಂಡ ಕೂಡ ಹೊಸ ದಾಖಲೆಯೊಂದನ್ನು ಬರೆದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೀಮ್ ಇಂಡಿಯಾದ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಮುರಿದಿದೆ. ಅಂದರೆ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ತಂಡವೆಂಬ ವಿಶ್ವ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿದೆ.
ಟೀಮ್ ಇಂಡಿಯಾ ಇಲ್ಲಿಯವರೆಗೂ 217 ಟಿ-20 ಪಂದ್ಯಗಳನ್ನು ಆಡಿದ್ದು, ಭಾರತದ ಬ್ಯಾಟ್ಸ್ಮನ್ಗಳು ಒಟ್ಟು 17 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿತ್ತು.ಆದರೀಗ ಈ ವಿಶ್ವ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುರಿದಿದೆ. ಟಿ20 ಕ್ರಿಕೆಟ್ನಲ್ಲಿ 246 ಪಂದ್ಯಗಳನ್ನಾಡಿರುವ ಆರ್ಸಿಬಿ ಪರ 18 ಶತಕಗಳು ಮೂಡಿಬಂದಿವೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ತಂಡ ಎಂಬ ದಾಖಲೆಯನ್ನು ಆರ್ಸಿಬಿ ಪಾಲಾಗಿದೆ.
ಆರ್ಸಿಬಿ ಪರ ಸಿಡಿಸಲಾಗಿರುವ 18 ಶತಕಗಳಲ್ಲಿ ವಿರಾಟ್ ಕೊಹ್ಲಿ (08), ಕ್ರಿಸ್ ಗೇಲ್ (05), ಎಬಿ ಡಿವಿಲಿಯರ್ಸ್ (02), ದೇವದತ್ ಪಡಿಕ್ಕಲ್ (01), ರಜತ್ ಪಾಟಿದಾರ್ (01), ಮನೀಶ್ ಪಾಂಡೆ (01) ಆರ್ಸಿಬಿ ಪರ ಶತಕಗಳನ್ನು ಸಿಡಿಸಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಆರ್ಸಿಬಿ (18), ಪಂಜಾಬ್ ಕಿಂಗ್ಸ್ (14) ಹಾಗೂ ರಾಜಸ್ಥಾನ ರಾಯಲ್ಸ್ (14) ನಂತರದ ಸ್ಥಾನದಲ್ಲಿವೆ.