

ನವದೆಹಲಿ: ಬಾಂಗ್ಲಾದೇಶದ ವಿರುದ್ಧ ನಾಳೆಯಿಂದ (ಸೆ.19) ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡ ಸಂಪೂರ್ಣ ಸಿದ್ಧಗೊಂಡಿದೆ. ಸ್ಪಿನ್ ಜೊತೆಗೆ ಪೇಸ್ ಬೌಲಿಂಗ್ ಮೂಲಕ ಬಾಂಗ್ಲಾ ಹುಲಿಗಳನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಮೈದಾನದಲ್ಲಿ ಭಾರಿ ಕಸರತ್ತು ನಡೆಸಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಬಹುಶಃ ಇದನ್ನು ಕ್ರಿಕೆಟ್ ಅಭಿಮಾನಿಗಳು ಕೂಡ ನಿರೀಕ್ಷೆ ಮಾಡಿರಲಿಲ್ಲ.
ಬಾಂಗ್ಲಾ ವಿರುದ್ಧದ ಸರಣಿಗೂ ಮುನ್ನವೇ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಬಿಸಿಸಿಐ ವಿಶೇಷ ಸಂದರ್ಶನವನ್ನು ಏರ್ಪಡಿಸಿದೆ. ಅದರ ಪ್ರೋಮೋ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ಗಂಭೀರ್ ಮತ್ತು ಕೊಹ್ಲಿ ತಮ್ಮ ಕೆಲವು ವಿಶೇಷ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಇಬ್ಬರ ನಡುವೆ ಕೆಲವೊಮ್ಮೆ ಜಗಳವೂ ನಡೆದಿದ್ದು, ಈ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ಈ ವಿಶೇಷ ಸಂದರ್ಶನದಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ಪ್ರೋಮೋ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಪೂರ್ಣ ಸಂಚಿಕೆಗಾಗಿ ಕಾಯುತ್ತಿದ್ದಾರೆ.
ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಯ ಕೆಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಗಂಭೀರ್ ನೆನಪಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಕೊಹ್ಲಿ ಗಳಿಸಿದ ರನ್‌ಗಳ ಪ್ರವಾಹದ ಬಗ್ಗೆ ಗಂಭೀರ್ ಮಾತನಾಡಿದ್ದಾರೆ. ಅದೇ ರೀತಿ ಕೊಹ್ಲಿ ಕೂಡ ಗಂಭೀರ್ ಅವರ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ, ಇಬ್ಬರ ನಡುವೆ ಕೆಲವು ತಮಾಷೆಯ ಸಂಭಾಷಣೆಗಳು ಸಹ ನಡೆದಿವೆ. ನೀವು ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಮಾಡುವಾಗ ಎದುರಾಳಿಗಳೊಂದಿಗೆ ಘರ್ಷಣೆ ಮಾಡಿದರೆ, ಅದು ನಿಮ್ಮನ್ನು ಕಂಫರ್ಟ್ ಝೋನ್‌ನಿಂದ ಹೊರಹಾಕುತ್ತದೆಯೇ? ಅಥವಾ ಇನ್ನೂ ಪ್ರೇರೇಪಿಸುತ್ತದೆಯೇ? ಎಂದು ಕೊಹ್ಲಿ ಪ್ರಶ್ನೆ ಮಾಡಿದಾಗ ನಗುತ್ತಲೇ ಉತ್ತರಿಸಿದ ಗಂಭೀರ್, ನೀವು ನನಗಿಂತ ಹೆಚ್ಚು ಜಗಳವಾಡುತ್ತೀರಾ? ಇದಕ್ಕೆ ಉತ್ತರ ನಿಮಗೆ ಗೊತ್ತಿರಬೇಕು ಎಂದಾಗ ಇಬ್ಬರು ನಗುತ್ತಾರೆ.
ಸದ್ಯ ಪ್ರೋಮೋ ವೈರಲ್ ಆಗಿದ್ದು, ಪೂರ್ಣ ಸಂದರ್ಶನ ಯಾವಾಗ ಬಿಡುಗಡೆಯಾಗುತ್ತೆ ಅಂತಾ ಕ್ರೀಡಾಭಿಮಾನಿಗಳು ಕಾದಿದ್ದಾರೆ. ಕೊಹ್ಲಿ ಮತ್ತು ಗಂಭೀರ್ ನಡುವೆ ಈ ಹಿಂದೆ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು. ಈ ಹಿನ್ನಲೆಯಲ್ಲಿ ಇವರಿಬ್ಬರ ನಡುವಿನ ವಿಶೇಷ ಸಂದರ್ಶನ ಬರುತ್ತಿರುವುದು ನಿಜಕ್ಕೂ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ಆಗಿದೆ. (ಏಜೆನ್ಸೀಸ್)