

ಮುಂಬೈ: ಏಕದಿನ ವಿಶ್ವಕಪ್ನ ಒಂದೇ ಇನ್ನಿಂಗ್ಸ್ನಲ್ಲಿ ಸಚಿನ್ ತೆಂಡುಲ್ಕರ್ ಅವರ ಎರಡು ದಾಖಲೆಗಳನ್ನು ಮುರಿಯುವ ಜತೆಗೆ ಹೆಗ್ಗಳಿಕೆಯೊಂದಕ್ಕೂ ಪಾತ್ರರಾದ ರನ್ ಮಷಿನ್ ವಿರಾಟ್ ಕೊಹ್ಲಿಗೆ ಇದೀಗ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಭರ್ಜರಿ ಓಪನಿಂಗ್ ನೀಡಿದ ರೋಹಿತ್-ಶುಭಮನ್ ಗಿಲ್ ಉತ್ತಮ ರನ್ ತಂದುಕೊಟ್ಟು, ತಮ್ಮ ತಂಡಕ್ಕೆ ಅದನ್ನು ಮುಂದುವರಿಸಲು ಬಿಟ್ಟರು. ಈ ವೇಳೆ ವಿರಾಟ್ ಕೊಹ್ಲಿ ಜತೆಗೂಡಿದ ಶ್ರೇಯಸ್ ಐಯ್ಯರ್ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ 397 ಬೃಹತ್ ಗುರಿಯನ್ನು ನ್ಯೂಜಿಲೆಂಡ್ಗೆ ನೀಡಿತು.
ಇಂದಿನ ಪಂದ್ಯದಲ್ಲಿ ವಿರಾಟ್ ತಮ್ಮ 50ನೇ ಶತಕ ಬಾರಿಸಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿಯೇ ಇತ್ತು. ಅದರಂತೆಯೇ ಕೊಹ್ಲಿ ಶತಕ ಸಿಡಿಸುವ ಮುಖೇನ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸಾಧಿಸಿದರು.
ಈ ಕುರಿತು ಅಭಿನಂದನೆ ತಿಳಿಸಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, "ಇದು ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ಅವರ 50ನೇ ಏಕದಿನ ಶತಕ ನಿಜಕ್ಕೂ ಅದ್ಭುತವಾಗಿದೆ" ಎಂದು ಹೇಳಿದರು. ಈ ಮೂಲಕ ವಿರಾಟ್ ಸಾಧನೆಗೆ ಗಂಗೂಲಿ ವಿಶೇಷ ಅಭಿನಂದನೆ ತಿಳಿಸಿದರು,(ಏಜೆನ್ಸೀಸ್).