

ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಅವರು ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಂಡರು. ಅನಿರೀಕ್ಷಿತ ಬಳೆವಣಿಗೆಯಲ್ಲಿ ಅವರು ಅನರ್ಹಗೊಂಡ ಪರಿಣಾಮ ಭಾರತದ ಪದಕದ ಆಸೆ ನುಚ್ಚು ನೂರಾಗಿದ್ದು, ಇದರ ಬೆನ್ನಲ್ಲೇ ಅವರು ನಿವೃತ್ತಿ ಘೋಷಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಇದೀಗ ಅರ್ಜಿಯನ್ನು ವಜಾ ಮಾಡಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರವನ್ನು ಆಗಸ್ಟ್ 16ಕ್ಕೆ ಮುಂದೂಡಿತ್ತು. ಆದರೆ ಇಂದು ದಿಢೀರ್ ನಿರ್ಧಾರ ಪ್ರಕಟಿಸಿದ CAS ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿದೆ.
ವಿನೇಶ್ ಅವರ ತಂಡವು ಆಗಸ್ಟ್ 7ರ ಸಂಜೆ ಸಿಎಎಸ್ಅನ್ನು ಸಂಪರ್ಕಿಸಿತ್ತು. ವಿನೇಶ್ ಅವರ ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಸ್ವೀಕರಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದೆ. ಆದರೆ ಭಾರತೀಯ ವಕೀಲರನ್ನು ನೇಮಿಸಲು ಸಾಧ್ಯವಾಗದ ಕಾರಣ ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಆದಾಗ್ಯೂ, ಸಿಎಎಸ್ ವಿನೇಶ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ವಕೀಲರ ನೇಮಕಕ್ಕೆ ಕಾಲಾವಕಾಶ ನೀಡಿತ್ತು. ಹೀಗಾಗಿ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಇಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲ. ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು. ವಿನೇಶ್ ಅವರು 2016ರ ರಿಯೋ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. 2016ರ ರಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಮೊಣಕಾಲಿನ ಗಾಯದಿಂದಾಗಿ ಅವರ ಪದಕದ ನಿರೀಕ್ಷೆಯು ಭಗ್ನಗೊಂಡಿತು. ಇದರ ನಂತರ, ಅವರು 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸೋತಿದ್ದರು. ಈಗ 2024ರಲ್ಲಿ ಅವರು ಅಧಿಕ ತೂಕದ ಕಾರಣದಿಂದ ಹೊರಬಿದಿದ್ದರು.