

ಬೆಂಗಳೂರು: ಸ್ಯಾಂಡಲ್ವುಡ್ನ ಒಳಿತಿಗಾಗಿ ಇಂದು (ಆಗಸ್ಟ್ 14) ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಮಾಡಿಸಲಾಗಿದೆ. ಪೂಜೆಯಲ್ಲಿ ಪಾಲ್ಗೊಂಡಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟ, ನಟಿ, ನಿರ್ಮಾಪಕರು, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಸಮಯದಲ್ಲಿ ನಟ ದರ್ಶನ್ ಜೈಲು ಸೇರಿರುವುದು ಬೇಸರದ ಸಂಗತಿಯಾಗಿದ್ದು, ಈ ಮೊದಲು ಪೂಜೆಯನ್ನು ದರ್ಶನ್ ಒಳಿತಿಗಾಗಿ ಮಾಡುತ್ತಿರುವ ಪೂಜೆ ಎನ್ನುವ ಊಹಾಪೋಹ ಹಬ್ಬಿತ್ತು. ಈಗಲೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದು, ನಟ ಜಗ್ಗೇಶ್ ಈ ಬಗ್ಗ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿದ ನಟ ಜಗ್ಗೇಶ್, ಇಲ್ಲಿ ಎಲ್ಲಾ ಕಲಾವಿದರು ಸೇರಿ ಒಂದು ಕಲಾವಿದರ ಸಂಘ ಮಾಡಿದೆವು. ಡಾ.ರಾಜ್ಕುಮಾರ್ ಅವರು ಈ ಹಿಂದೆ ಮೂರು, ತಿಂಗಳು ಆರು ತಿಂಗಳಿಗೊಮ್ಮೆ ಎಲ್ಲಾ ಕಲಾವಿದರನ್ನು ಸೇರಿಸಿ ಸಭೆ ಮಾಡುತ್ತಿದ್ದರು. ಯಾವುದಾದರೂ ಕಷ್ಟ ಸುಖ ಇದ್ದರೆ ಸ್ಪಂದಿಸುವ ಕೆಲಸವಾಗುತ್ತಿತ್ತು. ಹಿರಿಯರೆಲ್ಲಾ ಸೇರಿ ಈ ಕಟ್ಟಡವನ್ನು ಗಟ್ಟಿ ಮಾಡಿಸುವ ಕೆಲಸ ಮಾಡಿದರು.
ಅದಾದ ಮೇಲೆ ಯಾಕೋ ಇದು ಚಾಲನೆ ಆಗಲಿಲ್ಲ. ಅಲ್ಲಿಗೆ ನಿಂತು ಬಿಟ್ಟಿತು. ಬಹುಶಃ ರಾಕ್ಲೈನ್ ಅವರಿಗೆ ಇದು ಮನಸ್ಸಿಗೆ ಬಂದಿದೆ. ನಾವು ಅವರು ದೂರವಾಣಿಯಲ್ಲಿ ಮಾತನಾಡುವಾಗ ಕಷ್ಟದಿಂದ ಬಂದ ನಮಗೆ ಶಾರದೆ ಎಲ್ಲಾ ರೀತಿ ಆಶೀರ್ವಾದ ಮಾಡಿದ್ದಾಳೆ. ನಾವು ಯಾಕೆ ಮುಂದಿನ ಪೀಳಿಗೆಗೆ ಒಳ್ಳೆದಾಗಲಿ ಎಂದು ಹರಸಿ ಬಿಟ್ಟುಕೊಟ್ಟು ಬಿಡಬಾರದು ಅನ್ನುವುದನ್ನು ನಾನು ಹೇಳಿದೆ. ಅವರು ಕೂಡ ಅದನ್ನೇ ಹೇಳಿದರು ಎಂದರು. ಈಗ ಅದಕ್ಕೆ ಚಾಲನೆ ಸಿಕ್ಕಿದೆ. ಬೇರೆ ಕಡೆ ಎಲ್ಲಾ ಕಲಾವಿದರ ಸಂಘ ಬಲಿಷ್ಠವಾಗಿದೆ. ನಮ್ಮಲ್ಲಿ ಆಗಬೇಕು. ಮೊದಲು ಯಾರ್ಯಾರು ಈ ಕಲಾವಿದರ ಸಂಘದ ಸದಸ್ಯರಾಗಿದ್ದರೋ ಅವರೆಲ್ಲಾ ತೀರಿ ಹೋಗಿದ್ದಾರೆ. ಇನ್ನೊಂದು ಐವತ್ತು ಜನ ಉಳಿದಿದ್ದಾರೆ. ಅವರಿಂದ ಆಗುವುದಿಲ್ಲ. ಹೀಗಾಗಿ ಯಾರ್ಯಾರು ಈ ಕಲೆಗೆ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ ಅವರೆಲ್ಲಾ ಸದಸ್ಯರಾಗಬೇಕು ಎಂದು ಆಗ್ರಹಿಸಿದರು.
ನಿಂತು ಹೋದ ಕೆಲಸ ಮತ್ತೆ ಚಾಲನೆ ಆಗಬೇಕು ಅಂದರೆ ನಮ್ಮ ಸನಾತನ ಧರ್ಮದಲ್ಲಿ ನಂಬಿಕೆ ಇರುವವರಿಗೆ ಒಂದು ಪೂಜೆ ಮುಖೇನ ಆಗಬೇಕು ಎನ್ನುವುದು ಪದ್ಧತಿ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವಂತದ್ದು. ಅದನ್ನು ಇವತ್ತು ರಾಕ್ಲೈನ್ ಅವರ ಮುಂದಾಳತ್ವದಲ್ಲಿ ಎಲ್ಲರೂ ಮುಂದೆ ನಿಂತು ವಿಶೇಷವಾಗಿ ಪೂಜೆ ಮಾಡಿದ್ದಾರೆ. ವೈಯಕ್ತಿಕವಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ದರ್ಶನ್ ಅವರಿಗಾಗಿ ಮಾಡಿರುವ ಪೂಜೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ನಟ ಜಗ್ಗೇಶ್, ಆರಂಭದಲ್ಲಿ ಇದೇ ಮಾಹಿತಿ ಕೇಳಿ ಬಂತು. ಒಂದು ವೇಳೆ ದರ್ಶನ್ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ. ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಹಾಗಾಗಿ ಅಪಾರ್ಥ ಮಾಡಿಕೊಂಡಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ.
ನಾಗದೇವರು ಸಲಹೆ ನೀಡಿದೆ. ತಂದೆ-ತಾಯಿ ಮುಂದಿನ ಪೀಳಿಗೆಗೆ ಬುದ್ಧಿ ಹೇಳುವ ರೀತಿ ಒಗ್ಗಟ್ಟಾಗಿ ಹೋಗಿ ಎಂದಿದೆ. ನಾನು ಆಧ್ಯಾತ್ಮಿಕವಾಗಿ ಇರುವವನು. ಹಾಗಾಗಿ ನಿರ್ಮಾಪಕರ ಸಂಘಕ್ಕೆ ಸಲಹೆ ನೀಡಿದ್ದೆ. ಕೆಲವರಿಗೆ ದೇವರು ಅಂದ್ರೆ ಆಗಲ್ಲ. ಅಂಥವರಿಗೆ ನಾವು ಏನೂ ಮಾಡೋಕೆ ಆಗಲ್ಲ. ದೇವರನ್ನು ನಂಬುವವರ ಮತ್ತು ನಂಬದವರ ಬೆಳವಣಿಗೆ ಹೇಗಿದೆ ಅಂತ ನೀವೇ ನೋಡಿ ಎಂದು ನಟ ಜಗ್ಗೇಶ್ ಹೇಳಿದ್ದಾರೆ.