ಮುಂಬೈ: ಚಿತ್ರರಂಗದಲ್ಲಿ ಸ್ಟಾರ್ ನಟರಷ್ಟೇ ಹೆಚ್ಚು ಖ್ಯಾತಿ ಹಾಸ್ಯ ಕಲಾವಿದರು ಪಡೆದಿರುತ್ತಾರೆ. ಈ ವಿಚಾರಕ್ಕೆ ಬರುವುದಾದರೆ ಬಾಲಿವುಡ್ನ ಖ್ಯಾತ ಕಮಿಡಿಯನ್ ರಾಜ್ಪಾಲ್ ಯಾದವ್ ಹೆಸರು ಮೊದಲಿಗೆ ಕೇಳಿ ಬರುತ್ತದೆ. ನಟನೆಯಲ್ಲಿ ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ನಟ ತಮ್ಮ ಡೈಲಾಗ್ ಡೆಲಿವರಿ, ವಿಭಿನ್ನ ಮ್ಯಾನರಿಸಂ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಈ ನಟ ಇದೀಗ ಸಾಲದ ಸುಲಿಗೆ ಸಿಲುಕಿದ್ದು, ಇವರ ಆಸ್ತಿಯನ್ನು CBI ಮುಟ್ಟುಗೋಲು ಹಾಕಿಕೊಂಡಿದೆ.
ಅಸಲಿಗೆ CBI ಅಂದರೆ ಕೇಂದ್ರಿಯಾ ತನಿಖಾ ಸಂಸ್ಥೆಯಲ್ಲ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಂಬುದು ಇಲ್ಲಿ ಎಲ್ಲರೂ ಗಮನಿಸಬೇಕಾದ ಸಂಗತಿ. ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ನಟ ರಾಜ್ಪಾಲ್ ಯಾದವ್ಗೆ ಸೇರಿದ್ದು ಎನ್ನಲಾದ ಜಮೀನನ್ನು ಬ್ಯಾಂಕ್ನವರು ಮುಟ್ಟುಗೋಲು ಹಾಕಿಕೊಂಡಿದ್ದು, ನಟ ಸುಮಾರು 11 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು ಎಂದು ತಿಳಿದು ಬಂದಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ನಟ ರಾಜ್ಪಾಲ್ ಯಾದವ್ ಬಹಳ ವರ್ಷಗಳ ಹಿಂದೆ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್ಮೆಂಟ್ ಎಂದು ಹೆಸರಿಟ್ಟಿದ್ದರು. ನೌರಂಗ್-ಗೋಧಾವರಿ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಗೆ ರಾಜ್ಪಾಲ್ ಯಾದವ್ರ ಪತ್ನಿ ರಾಧಾ ಮಾಲಕಿ ಆಗಿದ್ದರು.
ಇದನ್ನೂ ಓದಿ: ಬಾಲರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ಗೆ ವೀಸಾ ನಿರಾಕರಿಸಿದ ಅಮೆರಿಕ!
ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ಚಿತ್ರ ನಿರ್ಮಿಸಿದ್ದ ರಾಜ್ಪಾಲ್ ಶಹಜಾನ್ಪುರದ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಸಿನಿಮಾ ಮಾಡಿದ್ದರು. ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ದಿ. ಓಂ ಪುರಿ ಕೂಡ ನಟಿಸಿದ್ದರು. ಈ ಸಿನಿಮಾ ನಿರ್ಮಿಸಲೆಂದು ನಟ ರಾಜ್ಪಾಲ್ ಸೆಂಟ್ರಲ್ ಬ್ಯಾಂಕ್ ಆಫ ಇಂಡಿಯಾದಲ್ಲಿ ತಮ್ಮ ಜಮೀನಿನ ಪತ್ರವನ್ನು ಅಡವಿಟ್ಟು ಮೂರು ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಆ ಬಳಿಕ ರಾಜ್ಪಾಲ್ ಯಾದವ್ಗೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ.
ಮೂರು ಕೋಟಿ ರೂಪಾಯಿ ಸಾಲಕ್ಕೆ ಬಡ್ಡಿ ಸೇರಿದಂತೆ ಶುಲ್ಕ, ದಂಡ ಒಳಗೊಂಡಂತೆ 11 ಕೋಟಿ ರೂಪಾಯಿಗಳಾಗಿದ್ದು, ಬ್ಯಾಂಕ್ನವರು ನೀಡಿದ ಯಾವ ನೋಟಿಸ್ಗೂ ನಟ ಪ್ರತಿಕ್ರಿಯಸದ ಕಾರಣ ಅಧಿಕಾರಿಗಳು ಇದೀಗ ಅವರ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಟ ಈ ಬಗ್ಗೆ ಇನ್ನಷ್ಟೇ ಉತ್ತರಿಸಬೇಕಿದೆ.