ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಬರ ಮುಂದುವರೆದಿದ್ದು, ಈ ಬಾರಿ ನಿರೀಕ್ಷಿತ ಪ್ರದರ್ಶನ ಬಾರದೆ ಇರುವುದು ಬೇಸರದ ಸಂಗತಿಯಾಗಿದೆ. ಶೂಟಿಂಗ್, ಹಾಕಿ, ಜಾವೆಲಿನ್ನಲ್ಲಿ ಪದಕ ಗೆದ್ದಿರುವ ಭಾರತ ತಂಡ ಮಹಿಳೆಯರ ಕುಸ್ತಿಯಲ್ಲಿ ಗೋಲ್ಡ್ ಅಥವಾ ಸಿಲ್ವರ್ ಮೆಡಲ್ ಗೆಲ್ಲಬಹುದು ಎಂದು ಹೇಳಲಾಗಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿನೇಶ್ ಪೋಗಟ್ ಅನರ್ಹಗೊಂಡ ಪರಿಣಾಮ ಭಾರತದ ಪದಕದ ಆಸೆ ನುಚ್ಚು ನೂರಾಯಿತು.
ಇನ್ನೂ ಕುಸ್ತಿ ತಂಡದ ಪ್ರದರ್ಶನದ ಕುರಿತು ಮಾತನಾಡಿರುವ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್, ಕಳೆದ ವರ್ಷ ದೆಹಲಿಯಲ್ಲಿ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯೇ ಭಾರತ ಕುಸ್ತಿಯಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಸರಿಯಾದ ಸಮಯಕ್ಕೆ ಸಾಲ ಕಟ್ಟದ ಖ್ಯಾತ ನಟ; CBIನಿಂದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ
ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಂಜಯ್ ಸಿಂಗ್, ಭಾರತ ಕುಸ್ತಿ ಒಂದರಲ್ಲೇ 6 ಪದಕಗಳನ್ನು ಗೆಲ್ಲಬಹುದಿತ್ತು. ಆದರೆ, ಕಳೆದ 15-16 ತಿಂಗಳಿನಿಂದ ಕುಸ್ತಿ ವಿಚಾರದಲ್ಲಿ ಆಗುತ್ತಿರುವ ಅಡಚಣೆಗಳಿಂದಲೇ ನಾವು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಬಾರಿ ನಾವು ಎರಡು ಪದಕಗಳನ್ನು ಗೆದ್ದಿದ್ದೆವು. ಆದರೆ, ಈ ಬಾರಿ ಬರಿ ಒಂದನ್ನು ಮಾತ್ರ ಗೆದ್ದಿದ್ದೇವೆ.
ಇನ್ನೊಂದು ಕೋನದಿಂದ ನೋಡಿದರೆ, 14-15 ತಿಂಗಳ ಕಾಲ ನಡೆದ ಪ್ರತಿಭಟನೆಗಳು ಇಡೀ ಕುಸ್ತಿ ವಿಭಾಗವನ್ನೇ ಕದಡಿತ್ತು. ಇತರ ವಿಭಾಗಗಳ ಕುಸ್ತಿಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಿಲ್ಲದೆ ಅಭ್ಯಾಸ ಮಾಡಲು ಸಾಧ್ಯವಾಗದೆ ಪರದಾಡಿದರು. ಹೀಗಾಗಿ ಕುಸ್ತಿಪಟುಗಳಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.