ನೀನು ಹೆಚ್ಚು ಸ್ವೀಪ್​ ಶಾಟ್​ಗಳನ್ನು ಹೊಡೆಯಬೇಡ; ಟೀಮ್​ ಇಂಡಿಯಾ ಆಟಗಾರನಿಗೆ ಅಫ್ಘನ್​ ಕ್ಯಾಪ್ಟನ್​ ಅವಾಜ್​

Rashid Khan
Published on

ಬಾರ್ಬೋಡಾಸ್​: ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 43ನೇ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಅಫ್ಘಾನಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, ಭಾರತ ಅಫ್ಘಾನಿಸ್ತಾನ ನಡುವಿನ ಸೂಪರ್​-08 ಪಂದ್ಯವು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದ್ದು, ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಬ್ಯಾಟ್ಸ್​ಮನ್​ಗಳು ಸೂರ್ಯಕುಮಾರ್​ ಯಾದವ್​ (53 ರನ್, 28 ಎಸೆತ, 5 ಬೌಡಂರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತ್ತು. 182 ರನ್​ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್​ ಇಂಡಿಯಾ ಬೌಲರ್​ಗಳು ಎದುರಾಳಿ ತಂಡವನ್ನು 134 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ತಂಡಕ್ಕೆ 47 ರನ್​ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಮ್​ ಇಂಡಿಯಾ ಬೃಹತ್​ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸೂರ್ಯಕುಮಾರ್​ ಯಾದವ್​ ಅಫ್ಘನ್​ ಬೌಲರ್​ಗಳನ್ನು ಬೆಂಡೆತ್ತಿದ್ದರು. ಈ ವೇಳೆ ರಶೀದ್​ ಖಾನ್​ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಬೌಂಡರಿಗಳನ್ನು ಸಿಡಿಸಿದರು. ಈ ವೇಳೆ ಸೂರ್ಯನ ಬಳಿ ಬಂದ ರಶೀದ್​ ನೀನು ನನ್ನ ಎಸೆತಗಳಿಗೆ ಸ್ವೀಪ್​ ಶಾಟ್​ ಹೊಡೆಯಬೇಡ ಎಂದು ಹೇಳಿದ್ದಾರೆ. ಈ ವೇಳೆ ಇದಕ್ಕೆ ಸೂರ್ಯಕುಮಾರ್​ ಯಾದವ್​ ನಗುತ್ತಲೇ ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಈ ಇಬ್ಬರು ನಡುವಿನ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇವರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ತೋರಿಸಿದೆ. ಕ್ರಿಕೆಟ್​ ಹೊರತಾಗಿ ಉಭಯ ತಂಡಗಳ ಆಟಗಾರರು ಉತ್ತಮ ಸ್ನೇಹಿತರಾಗಿದ್ದು, ಪ್ರತಿಬಾರಿ ಮುಖಾಮುಖಿಯಾದಾಗಲೂ ಕೀಟಲೆ ಮಾಡುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net