ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ಪರ್ಧಿಸಲಿರುವ ಭಾರತೀಯ ಕುಸ್ತಿಪಟುಗಳು ಭಾರತವನ್ನು ಪ್ರತಿನಿಧಿಸುವಂತಿಲ್ಲ: ಕಾರಣ ಇದು!

WFI
Published on

ನವದೆಹಲಿ: ಸದ್ಯದಲ್ಲೇ ನಡೆಯಲಿರುವ ವಿಶ್ವ ಚಾಂಪಿಯನ್​​ಷಿಪ್​​ನಲ್ಲಿ ಭಾಗವಹಿಸಲಿರುವ ಭಾರತೀಯ ಕುಸ್ತಿಪಟುಗಳು ರಾಷ್ಟ್ರಧ್ವಜದಡಿ ಸೆಣಸುವಂತಿಲ್ಲ. ಅಂಥ ಒಂದು ನಿರ್ಬಂಧಕ್ಕೆ ಅವರು ಒಳಗಾಗಿದ್ದು, ಅವರು ನ್ಯೂಟ್ರಲ್ ಅಥ್ಲೀಟ್​​ಗಳಾಗಿಯಷ್ಟೇ ಭಾಗಿ ಆಗಬಹುದಾಗಿದೆ. ಅರ್ಥಾತ್, ಅವರು ಭಾರತೀಯ ಕುಸ್ತಿಪಟುವಾಗಿದ್ದರೂ ಭಾರತವನ್ನು ಪ್ರತಿನಿಧಿಸುವಂತಿಲ್ಲ.

ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್​ಐ). ಸೂಕ್ತ ಸಮಯದೊಳಗೆ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯತ್ವವನ್ನು ಯುನೈಟೆಡ್​ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಅಮಾನತಿನಲ್ಲಿ ಇರಿಸಿದೆ.

ಲೆಕ್ಕಪ್ರಕಾರ ಇದೇ ಜೂನ್​ನಲ್ಲಿ ಡಬ್ಲ್ಯುಎಫ್​ಐ ಚುನಾವಣೆ ನಡೆಯಬೇಕಿತ್ತು. ವಿಶ್ವಮಟ್ಟದ ಕುಸ್ತಿ ಸಂಸ್ಥೆ ಆಗಿರುವ ಯುನೈಟೆಡ್​ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಡಬ್ಲ್ಯುಎಫ್​ಐಗೆ 45 ದಿನಗಳ ಗಡುವು ನೀಡಿ ಎಚ್ಚರಿಕೆ ನೀಡಿದ್ದ ಬಳಿಕವೂ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಿದೆ.

ಪರಿಣಾಮವಾಗಿ, ಸೆ. 16ರಿಂದ ನಡೆಯಲಿರುವ ಒಲಿಂಪಿಕ್​ಗೆ​ ಅರ್ಹತೆ ಒದಗಿಸುವ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತಿಲ್ಲ. ಅದಾಗ್ಯೂ ಸೆ. 23ರಿಂದ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಅವರು ರಾಷ್ಟ್ರಧ್ವಜವನ್ನು ಪ್ರತಿನಿಧಿಸಬಹುದು. ಇದಕ್ಕೆ ಪ್ರವೇಶ ಒದಗಿಸುತ್ತಿರುವುದು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಆಗಿದ್ದರಿಂದ ಈ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net