ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಬಾಂಗ್ಲಾದೇಶಕ್ಕೆ ಬಿಗ್​ ಶಾಕ್​ ಕೊಟ್ಟ ಕ್ರಿಕೆಟ್​ ಶಿಶು ಅಮೆರಿಕ!

BAN vs USA
Published on

ನ್ಯೂಯಾರ್ಕ್​: ಜೂನ್​ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ ಟೂರ್ನಿಗೆ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದೇ ಸಮಯದಲ್ಲಿ ಕ್ರಿಕೆಟ್​ ಶಿಶು ಅಮೆರಿಕ ಬಲಿಷ್ಠ ಬಾಂಗ್ಲಾದೇಶಕ್ಕೆ ಅನಿರೀಕ್ಷಿತ ಆಘಾತವನ್ನು ನೀಡಿದೆ. ಮೂರು ಟಿ20 ಪಂದ್ಯಗಳ ಸರಣಿಯ ಭಾಗವಾಗಿ ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಅಮೆರಿಕ ಸೋಲಿಸಿದೆ. ಈ ಮೂಲಕ ವಿಶ್ವಕಪ್ ಆರಂಭಕ್ಕೂ ಮುನ್ನವೇ ಅಮೆರಿಕ ಆತ್ಮವಿಶ್ವಾಸ ಹೆಚ್ಚಿದೆ.

ಟಿ20 ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕವೂ ಕೂಡ ಒಂದು. ಬಾಂಗ್ಲಾದೇಶದೊಂದಿಗೆ ಆರಂಭವಾದ ಮೂರು ಟಿ20 ಪಂದ್ಯಗಳ ಸರಣಿಯ ಅಂಗವಾಗಿ ಅಮೆರಿಕ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಅಮೆರಿಕದ ಬೌಲರ್‌ಗಳು ಬಾಂಗ್ಲಾದೇಶವನ್ನು ಬೃಹತ್ ಸ್ಕೋರ್ ಗಳಿಸದಂತೆ ತಡೆದರು. ಬಾಂಗ್ಲಾ ಆರಂಭಿಕರಾದ ಲಿಟನ್ ದಾಸ್ (14) ಮತ್ತು ಸೌಮ್ಯ ಸರ್ಕಾರ್ (20) ಅಲ್ಪ ರನ್ ಗಳಿಗೆ ಪೆವಿಲಿಯನ್​ಗೆ ಕಳುಹಿಸುವ ಮೂಲಕ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಆ ಬಳಿಕ ಕ್ಯಾಪ್ಟನ್ ಸ್ಯಾಂಟೊ (3) ಅವರನ್ನೂ ಔಟ್ ಮಾಡಿತು. ಆದರೆ ತೌಹಿದ್ ಹೃದಯ್‌ ನಿಂದಾಗಿ ಬಾಂಗ್ಲಾದೇಶ 153 ರನ್ ಗಳಿಸಿತು.

51 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ತೌಹಿದ್​ ಬ್ಯಾಟಿಂಗ್‌ಗೆ ಬಂದರು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದರು. 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

ಇದಾದ ಬಳಿಕ 154 ರನ್‌ಗಳ ಗುರಿಯನ್ನು 3 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಅಮೆರಿಕ ಗೆಲುವು ಸಾಧಿಸಿತು. ಕೋರಿ ಆಂಡರ್ಸನ್ (34*) ಮತ್ತು ಹರ್ಮಿತ್ ಸಿಂಗ್ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 33 ರನ್ ಗಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂದಹಾಗೆ ಹರ್ಮಿತ್ ಸಿಂಗ್​ ಭಾರತೀಯ ಮೂಲದ ಆಟಗಾರ. ರಣಜಿಯಲ್ಲಿ ಮುಂಬೈ ಮತ್ತು ಐಪಿಎಲ್‌ನಲ್ಲಿ ರಾಜಸ್ಥಾನ ತಂಡಗಳನ್ನು ಪ್ರತಿನಿಧಿಸಿದ್ದರು.

ಇನ್ನೂ ಈ ಪಂದ್ಯದಲ್ಲಿ ಒಂದು ಹಂತದಲ್ಲಿ ಅಮೆರಿಕ ಕೂಡ 94 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿದಿತ್ತು. ಆದರೆ ಆಂಡರ್ಸನ್-ಹಾರ್ಮಿತ್​ ಜೋಡಿ ಕೇವಲ 28 ಎಸೆತಗಳಲ್ಲಿ 64 ರನ್ ಸೇರಿಸಿ ಅಮೆರಿಕಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net