ಯುಎಸ್ ಓಪನ್ 2ನೇ ಸುತ್ತಿನಲ್ಲೇ ಹೊರಬಿದ್ದ ಪ್ಲಿಸ್ಕೋವಾ, ಮುಗುರುಜಾ

us open day 3 shock
Published on

ನ್ಯೂಯಾರ್ಕ್: ಕೆಲ ಪ್ರಮುಖ ಆಟಗಾರ್ತಿಯರ ಗೈರಿನಲ್ಲಿ ಅಗ್ರ ಶ್ರೇಯಾಂಕ ಸಂಪಾದಿಸಿದ್ದ ಜೆಕ್ ಗಣರಾಜ್ಯದ ಆಟಗಾರ್ತಿ ಕ್ಯಾರೊಲಿನಾ ಪ್ಲಿಸ್ಕೋವಾ ಯುಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ 2ನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಫ್ರಾನ್ಸ್​ನ ಕ್ಯಾರೊಲಿನ್ ಗಾರ್ಸಿಯಾ ವಿರುದ್ಧ ಪ್ಲಿಸ್ಕೋವಾ ಆಘಾತ ಎದುರಿಸಿದರು. ಗುರುವಾರದ ಮೊದಲ ಪಂದ್ಯದಲ್ಲಿ 10ನೇ ಶ್ರೇಯಾಂಕಿತೆ ಗಾರ್ಬಿನ್ ಮುಗುರುಜಾ ಕೂಡ ಮುಗ್ಗರಿಸಿದರು. ಉಳಿದಂತೆ ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ನೊವಾಕ್ ಜೋಕೊವಿಕ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, ಮಹಿಳಾ ಸಿಂಗಲ್ಸ್‌ನಲ್ಲಿ ಸ್ಟಾರ್ ಆಟಗಾರ್ತಿಯರಾದ ಪೆಟ್ರಾ ಕ್ವಿಟೋವಾ, ನವೊಮಿ ಒಸಾಕಾ, ಏಂಜೆಲಿಕ್ ಕೆರ್ಬರ್ 3ನೇ ಸುತ್ತಿಗೇರುವಲ್ಲಿ ಸಲರಾಗಿದ್ದಾರೆ.

ವಿಶ್ವ ನಂ. 3 ಪ್ಲಿಸ್ಕೋವಾ ಬುಧವಾರ ನಡೆದ ಕಾದಾಟದಲ್ಲಿ 1-6, 6-7 ನೇರಸೆಟ್‌ಗಳಿಂದ ವಿಶ್ವ ನಂ. 50 ಆಟಗಾರ್ತಿ ಗಾರ್ಸಿಯಾಗೆ ಶರಣಾದರು. ಪಂದ್ಯದ ಆರಂಭದಿಂದಲೇ ಪ್ಲಿಸ್ಕೋವಾ ಲಯ ಕಂಡುಕೊಳ್ಳಲು ಪರದಾಡಿದರು. ಕರೊನಾ ವೈರಸ್ ಭೀತಿಯಿಂದಾಗಿ ಈ ಬಾರಿಯ ಟೂರ್ನಿಯಲ್ಲಿ ಎಲ್ಲ ಪಂದ್ಯಗಳು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿವೆ.

ಕ್ಯಾರೊಲಿನ್​ ಗಾರ್ಸಿಯಾ ಗೆಲುವಿನ ಸಂಭ್ರಮ

ಮೊದಲ ಸುತ್ತಿನಲ್ಲಿ 32 ಶ್ರೇಯಾಂಕಿತರ ಪೈಕಿ 29 ಆಟಗಾರ್ತಿಯರು ಜಯಿಸಿದ್ದರು. ಆದರೆ 2ನೇ ಸುತ್ತಿನಲ್ಲಿ ಹೆಚ್ಚಿನ ಶ್ರೇಯಾಂಕಿತ ಆಟಗಾರ್ತಿಯರಿಗೆ ಆಘಾತ ಎದುರಾಗಿದೆ. ಸ್ಪೇನ್ ತಾರೆ ಮುಗುರುಜಾ 2ನೇ ಸುತ್ತಿನಲ್ಲಿ, 3 ವರ್ಷಗಳ ತಾಯ್ತನದ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದಿರುವ ಬಲ್ಗೇರಿಯಾದ ಸ್ವೆಟನಾ ಪಿರೊಂಕೋವಾ ಎದುರು 5-7, 3-6 ನೇರಸೆಟ್‌ಗಳಿಂದ ಶರಣಾದರು.

13ನೇ ಶ್ರೇಯಾಂಕಿತೆ ಅಮೆರಿಕದ ಆಲಿಸನ್ ರಿಸ್ಕೆ, 12ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಮರ್ಕೆಟಾ ವೊಂಡ್ರಾಸೋವಾ, 30ನೇ ಶ್ರೇಯಾಂಕಿತೆ ಫ್ರಾನ್ಸ್​ನ  ಕ್ರಿಸ್ಟಿನಾ ಮ್ಲಾಡೆನೋವಿಕ್, 11ನೇ ಶ್ರೇಯಾಂಕಿತೆ ಕಜಾಕ್‌ಸ್ತಾನದ ಎಲೆನಾ ರೈಬಕಿನಾ 2ನೇ ಸುತ್ತಿನಲ್ಲೇ ಆಘಾತ ಎದುರಿಸಿದರು.

ಜೋಕೊವಿಕ್‌ಗೆ ಸತತ 25ನೇ ಜಯ

ಫೆಡರರ್​, ನಡಾಲ್ ಗೈರಿನಲ್ಲಿ 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳುವ ಹಂಬಲದಲ್ಲಿರುವ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ 2ನೇ ಸುತ್ತಿನಲ್ಲೇ ಮೊದಲ ಸೆಟ್ ಸೋಲಿನ ನಡುವೆಯೂ ಬ್ರಿಟನ್‌ನ ಕೈಲ್ ಎಡ್ಮಂಡ್‌ಗೆ ಸೋಲುಣಿಸಿದರು. 6-7, 6-3, 6-4, 6-2ರಿಂದ ಗೆದ್ದ 33 ವರ್ಷದ ಜೋಕೋ ಈ ವರ್ಷದ ಅಜೇಯ ಗೆಲುವಿನ ಓಟವನ್ನು ಸತತ 25ನೇ ಪಂದ್ಯಕ್ಕೆ ವಿಸ್ತರಿಸಿದರು. 4ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟಿಾನೊ ಸಿಸಿಪಾಸ್ 7-6, 6-3, 6-4ರಿಂದ ಅಮೆರಿಕದ ಮ್ಯಾಕ್ಸಿಮ್ ಕ್ರೇಸಿಗೆ ಸೋಲುಣಿಸಿ 3ನೇ ಸುತ್ತಿಗೇರಿದರು.

ಕೆರ್ಬರ್​, ಕ್ವಿಟೋವಾಗೆ ಮುನ್ನಡೆ

ಟೂರ್ನಿಯಲ್ಲಿ ಆಡುತ್ತಿರುವ ಕೆಲವೇ ಗ್ರಾಂಡ್ ಸ್ಲಾಂ ವಿಜೇತರ ಸಾಲಿಗೆ ಸೇರಿರುವ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಜರ್ಮನಿಯ ಏಂಜೆಲಿಕ್ ಕೆರ್ಬರ್ ಮತ್ತು ಜಪಾನ್‌ನ ನವೊಮಿ ಒಸಾಕಾ ಸುಲಭ ಜಯದೊಂದಿಗೆ 2ನೇ ಸುತ್ತಿನ ತಡೆ ದಾಟಿದರು. 6ನೇ ಶ್ರೇಯಾಂಕಿತೆ ಕ್ವಿಟೋವಾ, 7-6, 6-2ರಿಂದ ಉಕ್ರೇನ್‌ನ ಕೊಜ್ಲಾವಾ ವಿರುದ್ಧ, 17ನೇ ಶ್ರೇಯಾಂಕಿತೆ ಕೆರ್ಬರ್ 6-3, 7-6ರಿಂದ ದೇಶಬಾಂಧವೆ ್ರೆಡ್‌ಸಮ್ ವಿರುದ್ಧ ಮತ್ತು 4ನೇ ಶ್ರೇಯಾಂಕಿತೆ ಒಸಾಕಾ 6-2, 6-2ರಿಂದ ಇಟಲಿಯ ಕ್ಯಾಮಿಲಾ ಜಿಯೋರ್ಜಿ ವಿರುದ್ಧ ಗೆಲುವು ದಾಖಲಿಸಿದರು.

ದಿವಿಜ್ ಶರಣ್ ಜೋಡಿಗೆ ಸೋಲು

ಭಾರತದ ದಿವಿಜ್ ಶರಣ್ ಮತ್ತು ಸೆರ್ಬಿಯಾದ ನಿಕೋಲ ಕ್ಯಾಸಿಕ್ ಜೋಡಿ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದೆ. 8ನೇ ಶ್ರೇಯಾಂಕಿತ ನೆದರ್ಲೆಂಡ್‌ನ ವೆಸ್ಲೆ ಕೂಲ್‌ಹ್ಾ ಮತ್ತು ಕ್ರೊವೇಷಿಯಾದ ನಿಕೋಲ ಮೆಕ್ಟಿಕ್ ಜೋಡಿಯ ವಿರುದ್ಧ ರೋಚಕ ಕಾದಾಟದಲ್ಲಿ ದಿವಿಜ್-ಕ್ಯಾಸಿಕ್ ಜೋಡಿ 4-6, 6-3, 3-6ರಿಂದ ಸೋಲು ಕಂಡಿತು. ಕನ್ನಡಿಗ ರೋಹನ್ ಬೋಪಣ್ಣ ಟೂರ್ನಿಯ ಡಬಲ್ಸ್ ಕಣದಲ್ಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net