ಕ್ರೀಡಾ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರೇಕೆ? ಬದಲಾಯಿಸಿ ಎಂದ ಕುಸ್ತಿಪಟು ಬಬಿತಾ ಪೋಗಟ್

babitha rajiv gandhi
Published on

ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ‘ರಾಜೀವ್ ಗಾಂಧಿ ಖೇಲ್‌ರತ್ನ’ ಎಂದು ಹೆಸರಿಟ್ಟಿರುವ ಬಗ್ಗೆ ಕುಸ್ತಿಪಟು ಬಬಿತಾ ಪೋಗಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಶಸ್ತಿಯ ಹೆಸರು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕ್ರೀಡಾ ಪ್ರಶಸ್ತಿಗೆ ಕ್ರೀಡಾ ಸಾಧಕರ ಹೆಸರನ್ನೇ ಇಡಬೇಕು. ದೇಶದ ಮಾಜಿ ಪ್ರಧಾನಿಯ ಹೆಸರನ್ನು ಯಾಕೆ ಇಡಲಾಗಿದೆ ಎಂದೂ ಬಬಿತಾ ಪೋಗಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಖೇಲ್‌ರತ್ನ ಪ್ರಶಸ್ತಿಯಲ್ಲಿ ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಯಾವುದಾದರೂ ಕ್ರೀಡಾ ಸಾಧಕರ ಹೆಸರು ಇದ್ದರೆ ಅದನ್ನು ಪಡೆಯುವ ಕ್ರೀಡಾಪಟುಗಳಿಗೆ ಇನ್ನಷ್ಟು ಹೆಮ್ಮೆ ಎನಿಸುತ್ತಿತ್ತು. ನಾವು ಸಾಕಷ್ಟು ಒಲಿಂಪಿಕ್ಸ್ ಪದಕ ವಿಜೇತರು ಮತ್ತು ವಿಶ್ವ ಚಾಂಪಿಯನ್‌ಗಳನ್ನು ಹೊಂದಿದ್ದೇವೆ. ಅವರಲ್ಲಿ ಯಾರಾದರೂ ಒಬ್ಬರ ಹೆಸರನ್ನು ನೀಡಿದ್ದರೆ, ಕ್ರೀಡಾಪಟುಗಳಿಗೆ ಇನ್ನಷ್ಟು ಸ್ಫೂರ್ತಿಯೂ ಸಿಗುತ್ತಿತ್ತು’ ಎಂದು ಬಬತಾ ಪೋಗಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಬಿತಾ ಪೋಗಟ್ ಅವರ ಸಹೋದರಿಯರು ಮತ್ತು ತಂದೆ ಮಹಾವೀರ್ ಪೋಗಟ್ ಅವರ ಜೀವನಾಧರಿತ ‘ದಂಗಲ್’ ಸಿನಿಮಾ ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಬಬಿತಾ ಪೋಗಟ್ ಕಳೆದ ವರ್ಷ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿ ಸೋಲು ಕಂಡಿದ್ದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಬಾರಿ ವರ್ಚುವಲ್ ಸಮಾರಂಭದ ಮೂಲಕ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದು, ಇದೇ ಮೊದಲ ಬಾರಿಗೆ ಐವರು ಕ್ರೀಡಾಪಟುಗಳು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಈ ಪೈಕಿ ಬಬಿತಾ ಪೋಗಟ್ ಅವರ ಸಹೋದರಿ ವಿನೇಶ್ ಪೋಗಟ್ ಕೂಡ ಸೇರಿದ್ದರು. ಆದರೆ ಕರೊನಾ ಸೋಂಕಿನ ಕಾರಣದಿಂದಾಗಿ ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net