ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

ipl virushka
Published on

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ ವಾರ ಅಪ್ಪ-ಅಮ್ಮ ಆಗುತ್ತಿರುವ ಸುದ್ದಿಯನ್ನು ಪ್ರಕಟಿಸಿ ಅಭಿಮಾನಿಗಳಿಗೆ ಸಿಹಿ-ಸುದ್ದಿ ನೀಡಿದ್ದರು. 2021ರ ಜನವರಿಯಲ್ಲಿ ಮಗು ಜನಿಸಲಿದೆ ಎಂದೂ ಹೇಳಿದ್ದರು. ಇದರ ಬೆನ್ನಲ್ಲೇ ಅವರ ಅಭಿಮಾನಿಗಳು, ಗಂಡಾಗಲಿ-ಹೆಣ್ಣಾಗಲಿ ಮಗುವನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಇದರ ನಡುವೆ ಜ್ಯೋತಿಷಿಯೊಬ್ಬರು ವಿರೂಷ್ಕಾ ಖ್ಯಾತಿಯ ದಂಪತಿಗೆ ಹೆಣ್ಣು ಮಗು ಹುಟ್ಟುವುದೋ ಅಥವಾ ಗಂಡು ಮಗು ಹುಟ್ಟುವುದೋ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ!

ಬೆಂಗಳೂರಿನ ಜನಪ್ರಿಯ ಜ್ಯೋತಿಷಿ ಪಂಡಿತ್ ಜಗನ್ನಾಥ್ ಎಂಬವರು ದಂಪತಿಗೆ ಹೆಣ್ಣು ಮಗು ಜನಿಸಲಿದೆ ಎಂದು ಹೇಳಿದ್ದಾರೆ. ‘ಮಗು ಗಂಡಾಗಲಿ-ಹೆಣ್ಣಾಗಲಿ ಅದು ದೇವರ ಉಡುಗೊರೆ ಮತ್ತು ಇಬ್ಬರೂ ಸಮಾನ ಸಾಮರ್ಥ್ಯ ಹೊಂದಿರುತ್ತಾರೆ. ಅಲ್ಲದೆ ಇದೀಗ ಕೆಲ ಕ್ಷೇತ್ರಗಳಲ್ಲಿ ಪುರುಷರನ್ನು ಮಹಿಳೆಯರು ಹಿಂದಿಕ್ಕುತ್ತಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಅವರ ಫೇಸ್ ರೀಡಿಂಗ್ ಮತ್ತು ಜ್ಯೋತಿಷ್ಯ ಶಾಸದ ಲೆಕ್ಕಾಚಾರದ ಪ್ರಕಾರ ಅವರಿಗೆ ಹೆಣ್ಣು ಮಗು ಜನಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಪಂಡಿತ್ ಜಗನ್ನಾತ್ ಟಿವಿ ಚಾನಲ್ ಒಂದಕ್ಕೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಲು ಸಜ್ಜಾಗುತ್ತಿರುವ ನಡುವೆ, ಅನುಷ್ಕಾ ಶರ್ಮ ಕೂಡ ಯುಎಇಯಲ್ಲಿ ಪತಿಯನ್ನು ಕೂಡಿಕೊಂಡಿದ್ದಾರೆ. ದಂಪತಿ ಇತ್ತೀಚೆಗೆ ಮಗುವಿನ ಆಗಮನದ ಸುದ್ದಿಯನ್ನು ಆರ್‌ಸಿಬಿ ತಂಡದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಕೊಹ್ಲಿ-ಅನುಷ್ಕಾ ದಂಪತಿ 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net