ಡೇಲ್ ಸ್ಟೈನ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ

Dale steyn
Published on

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇಲ್ ಸ್ಟೈನ್ ಮನೆಯಲ್ಲಿ ಕಳೆದ ಶುಕ್ರವಾರದಿಂದ ಈಚೆಗೆ ಮೂರು ಬಾರಿ ಕಳ್ಳತನಕ್ಕೆ ಯತ್ನನಡೆದಿದೆ. ಈ ಕುರಿತು ಟ್ವೀಟ್ ಮಾಡಿರುವ ಸ್ಟೈನ್, ನನ್ನ ತಾಯಿ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ ಎಂದು ಸ್ಟೈನ್ ಟ್ವೀಟ್ ಮಾಡಿದ್ದಾರೆ. ಇದರಿಂದ ಮನೆ ಮಂದಿ ಎಲ್ಲ ಭಯ ಭೀತರಾಗಿದ್ದೇವೆ ಎಂದಿದ್ದಾರೆ.

ಕಳೆದ ಶುಕ್ರವಾರ ಸ್ನೇಹಿತರ ಕಾರನ್ನು ಪುಡಿಪುಡಿ ಮಾಡಲಾಗಿದೆ. ದಯವಿಟ್ಟು ಮನೆಯಲ್ಲೇ ಎಲ್ಲರೂ ಸುರಕ್ಷಿತವಾಗಿರಿ, ಜನರನ್ನು ಭಯ ಭೀತಗೊಳಿಸಲು ಕೆಲಮಂದಿ ಸಂಚು ರೂಪಿಸುತ್ತಿದ್ದಾರೆ ಎಂದು ಸ್ಟೈನ್ ಟ್ವೀಟ್ ಮಾಡಿದ್ದಾರೆ. ಆದರೆ, ಘಟನೆ ಕುರಿತು ಸ್ಟೈನ್ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿಲ್ಲ. ಲಾಕ್‌ಡೌನ್ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಕಳ್ಳತನ ಪ್ರಕರಣಗಳು ಅಧಿಕವಾಗುತ್ತಿವೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿರುವ ಸ್ಟೈನ್, ಮುಂಬರುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ವಾಪಸಾಗಿದ್ದರು. ಭುಜದ ನೋವಿಗೆ ತುತ್ತಾದ ಬಳಿಕ ಸ್ಟೈನ್ 2019ರ ಮಾರ್ಚ್ ತಿಂಗಳಿಂದ ದ.ಆಫ್ರಿಕಾ ತಂಡದ ಪರ ಆಡಿಲ್ಲ. ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್‌ ತಂಡ ಪ್ರತಿನಿಧಿಸಿದ್ದರು.

ಸ್ಟೈನ್ ಮುಂಬರುವ ಟಿ20 ವಿಶ್ವಕಪ್ ಆಡುವ ಹಂಬಲದಲ್ಲಿದ್ದಾರೆ. ಆದರೆ, ಟೂರ್ನಿಯೇ ಅನಿಶ್ಚಿತತೆಯಲ್ಲಿ ಮುಳುಗಿದೆ. ಬುಧವಾರ ಸಭೆ ಸೇರಿದ್ದ ಐಸಿಸಿ ಯಾವುದೇ ತೀರ್ಮಾನ ಕೈಗೊಳ್ಳದೆ, ಜುಲೈವರೆಗೂ ಮುಂದೂಡಿದೆ. ಸ್ಟೈನ್ ದಕ್ಷಿಣ ಆಫ್ರಿಕ ಪರ 93 ಟೆಸ್ಟ್, 125 ಏಕದಿನ ಹಾಗೂ 47 ಟಿ20 ಪಂದ್ಯಗಳಿಂದ ಕ್ರಮವಾಗಿ 429, 196 ಹಾಗೂ 64 ವಿಕೆಟ್ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net