

Tristan Stubbs : ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಗುರುವಾರ (ಸೆ.04) ಲಂಡನ್ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಔಟಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಶಾಟ್ ಹೊಡೆಯುವಾಗ ತಮ್ಮ ಬ್ಯಾಟ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಗಾಳಿಯಲ್ಲಿ ಹಾರಿದ ಬ್ಯಾಟ್ ಕೆಳಗೆ ಬಿದ್ದು ವಿಕೆಟ್ಗಳಿಗೆ ತಗುಲುವಷ್ಟರಲ್ಲಿ ಸ್ಟಬ್ಸ್ ತಮ್ಮ ಕೈಗಳಿಂದ ಬ್ಯಾಟ್ ಅನ್ನು ಪಕ್ಕಕ್ಕೆ ತಳ್ಳಿದರು. ಇದರ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ನ 31ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಅನ್ನು ಶಕೀಬ್ ಮಹಮೂದ್ ಬೌಲ್ ಮಾಡಿದರು. ಈ ಓವರ್ನಲ್ಲಿ ಸ್ಟಬ್ಸ್ ಬ್ಯಾಕ್ ಫೂಟ್ನಲ್ಲಿ ಡಿಫೆನ್ಸ್ ಶಾಟ್ ಆಡಿದರು. ಆದರೆ, ಅವರು ತಮ್ಮ ಬ್ಯಾಟ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಬ್ಯಾಟ್ ಅವರ ಕೈಯಿಂದ ಜಾರಿ, ಗಾಳಿಯಲ್ಲಿ ಹಾರಿ ಸ್ಟಂಪ್ಗಳ ಹತ್ತಿರ ಬಿತ್ತು. ಈ ವೇಳೆ ಸ್ಟಬ್ಸ್, ಬ್ಯಾಟ್ ವಿಕೆಟ್ಗಳಿಗೆ ತಾಗದಂತೆ ರಕ್ಷಿಸಲು ಬ್ಯಾಟ್ ಅನ್ನು ತಡೆದರು. ಇಲ್ಲದೇ ಹೋಗಿದ್ದರೆ ಸ್ಟಬ್ಸ್ ವಿಚಿತ್ರ ರೀತಿಯಲ್ಲಿ ಔಟಾಗುತ್ತಿದ್ದರು.
ಇನ್ನು ಬೌಲರ್ ಶಕೀಬ್ ಅವರು ಔಟ್ ಆಗುತ್ತೇನೋ ಅಂತ ಆಸೆಗಣ್ಣುಗಳಿಂದ ನೋಡುತ್ತಿದ್ದರು. ಆದರೆ, ಸ್ಟಬ್ಸ್ ಅವರು ಬ್ಯಾಟ್ ಅನ್ನು ತಡೆದಿದ್ದನ್ನು ನೋಡಿ ಅಯ್ಯೋ ಔಟ್ ಮಿಸ್ ಆಯ್ತಲ್ಲ ಅನ್ನೋ ಬೇಜಾರಿನಿಂದ ಸಪ್ಪೆ ಮೋರೆ ಹಾಕಿಕೊಂಡರು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ಸ್ಟಬ್ಸ್ ಅವರು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.
ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ದಕ್ಷಿಣ ಆಫ್ರಿಕಾ 5 ರನ್ಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 330 ರನ್ ಗಳಿಸಿತು. ಮ್ಯಾಥ್ಯೂ ಬ್ರಿಟ್ಜ್ಕೆ (85) ಮತ್ತು ಟ್ರಿಸ್ಟಾನ್ ಸ್ಟಬ್ಸ್ (58) ಅರ್ಧಶತಕಗಳನ್ನು ಗಳಿಸಿದರು. ಜೋಫ್ರಾ ಆರ್ಚರ್ ನಾಲ್ಕು ವಿಕೆಟ್ ಪಡೆದರೆ, ಆದಿಲ್ ರಶೀದ್ ಎರಡು ವಿಕೆಟ್ ಪಡೆದರು. ಜಾಕೋಬ್ ಬೆಥೆಲ್ ಒಂದು ವಿಕೆಟ್ ಪಡೆದರು.
ಅದಾದ ನಂತರ, ಜೋ ರೂಟ್ (61), ಜೋಸ್ ಬಟ್ಲರ್ (61) ಮತ್ತು ಜಾಕೋಬ್ ಬೆಥೆಲ್ (58) ಅವರ ಯಶಸ್ಸಿನ ಹೊರತಾಗಿಯೂ, ಇಂಗ್ಲೆಂಡ್ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 325 ರನ್ಗಳಿಗೆ ಸೀಮಿತವಾಯಿತು. ದಕ್ಷಿಣ ಆಫ್ರಿಕಾದ ಬೌಲರ್ಗಳಲ್ಲಿ, ನಾಂಡ್ರೆ ಬರ್ಗರ್ ಮೂರು ವಿಕೆಟ್ಗಳನ್ನು ಮತ್ತು ಕೇಶವ್ ಮಹಾರಾಜ್ ಎರಡು ವಿಕೆಟ್ಗಳನ್ನು ಪಡೆದರು. ಕಾರ್ಬಿನ್ ಬಾಷ್, ಸೆನುರನ್ ಮುತ್ತುಸಾಮಿ ಮತ್ತು ಲುಂಗಿ ಎಂಗಿಡಿ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)