ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್​ ಪಂದ್ಯ ಆರಂಭ... ಆದರೆ ಒಂದು ಕಂಡೀಷನ್​! Chinnaswamy Stadium

Chinnaswamy Stadium
Published on

Chinnaswamy Stadium : ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ವರ್ಷ ಏಪ್ರಿಲ್​-ಮೇ ತಿಂಗಳಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ ಟ್ರೋಫಿಯನ್ನು ಜಯಿಸಿತು. ಟೂರ್ನಿ ಮುಗಿದ ಮರುದಿನವೇ ಆರ್‌ಸಿಬಿ ತಂಡ ಆಯೋಜಿಸಿದ್ದ ವಿಜಯೋತ್ಸವ ಮೆರವಣಿಗೆ ಯಾರೂ ನಿರೀಕ್ಷೆ ಮಾಡಿರದ ರೀತಿ ದುರಂತವಾಗಿ ಮಾರ್ಪಟ್ಟಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು.

ಅಂದಹಾಗೆ, ಚಿನ್ನಸ್ವಾಮಿ ಕ್ರೀಡಾಂಗಣವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ, ಹೀಗಾಗಿ ಅಲ್ಲಿ ಯಾವುದೇ ಪಂದ್ಯಗಳನ್ನು ನಡೆಸಬಾರದು ಎಂದು ಅನೇಕ ವರದಿಗಳು ಹೇಳಿವೆ. ಇತ್ತ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಚಿನ್ನಾಸ್ವಾಮಿ ಕ್ರೀಡಾಂಗಣವನ್ನು ಬೇರೆಡೆ ಸ್ಥಳಾಂತರಿಸುವ ಮಾತುಗಳನ್ನು ಸಹ ಆಡಿದೆ.

ಇದರ ನಡುವೆ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ 2025 ಪಂದ್ಯಗಳನ್ನು ಕೂಡ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್​ಸಿಎ) ಇತ್ತೀಚೆಗೆ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಚಿನ್ನಸ್ವಾಮಿಯಲ್ಲಿ ಮತ್ತೆ ಪಂದ್ಯಗಳನ್ನು ನಡೆಸಲು ದಾರಿ ಸುಗಮವಾಗಿದೆ.

ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ. ಕೆಎಸ್​ಸಿಎ ​​ಆಶ್ರಯದಲ್ಲಿ ನಡೆಯಲಿರುವ ಈ ಪಂದ್ಯಾವಳಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಟೂರ್ನಿಯಲ್ಲಿ ಆರು ಪಂದ್ಯಗಳು ನಡೆಯಲಿವೆ. ಇದರಲ್ಲಿ ಸೆಮಿಫೈನಲ್ ಜೊತೆಗೆ ಅಂತಿಮ ಪಂದ್ಯವೂ ಸೇರಿರುವುದು ಗಮನಾರ್ಹ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳನ್ನು ಅಭಿಮಾನಿಗಳಿಗೆ ನೇರವಾಗಿ ವೀಕ್ಷಿಸಲು ಅವಕಾಶವಿಲ್ಲ. ಅಂದರೆ, ಕ್ರೀಡಾಂಗಣಕ್ಕೆ ಅಭಿಮಾನಿಗಳ ಎಂಟ್ರಿಗೆ ಅವಕಾಶವಿಲ್ಲ. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್​ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೆ, ಈ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಇವುಗಳಲ್ಲಿ ಮುಂಬೈ, ಬರೋಡಾ, ವಿದರ್ಭ ಮತ್ತು ಇತರ ತಂಡಗಳು ಸೇರಿವೆ. ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಹನುಮ ವಿಹಾರಿ, ವಿಜಯ್ ಶಂಕರ್ ಅವರಂತಹ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡುತ್ತಿರುವುದರಿಂದ, ಅಭಿಮಾನಿಗಳ ಗಮನ ಈ ಪಂದ್ಯಾವಳಿಯ ಮೇಲೆ ಬಿದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net