

ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ಬ್ಯಾಟಿಂಗ್ ಬಿರುಗಾಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ರನ್ ಮಳೆಯಿಂದ ಮುಳುಗಡೆಯಾಗಿತ್ತು. ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್‌ಗಳು ಸೃಷ್ಟಿಸಿದ ಸುನಾಮಿಯಲ್ಲಿ ಆರ್‌ಸಿಬಿ ಬೌಲರ್‌ಗಳು ಕೊಚ್ಚಿಹೋದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ದೊಡ್ಡ ಸ್ಪೋಟಕ ಆಟವೆಂದೇ ಹೇಳಬಹುದು. ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಸನ್ ರೈಸರ್ಸ್ ಬ್ಯಾಟ್ಸ್‌ಮನ್‌ಗಳು ಮಾಸ್ ಹಿಟ್ಟಿಂಗ್ ಮೂಲಕ ಶಿವತಾಂಡವ ಮಾಡಿದರು.
ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 287 ರನ್ ಗಳಿಸಿತು. ಈ ಮೂಲಕ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಯಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಶತಕವೇ ತಂಡದ ಇನ್ನಿಂಗ್ಸ್ನ ಹೈಲೈಟ್.
ಹೆಡ್ ಅವರು 41 ಎಸೆತಗಳಲ್ಲಿ 102 ರನ್ ಗಳಿಸಿದರು. 39 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 8 ಬೃಹತ್ ಸಿಕ್ಸರ್‌ಗಳಿವೆ. ಯಾವುದೇ ಬೌಲರ್‌ಗಳನ್ನು ಲೆಕ್ಕಿಸದೆ ವಿನಾಶಕಾರಿ ಬ್ಯಾಟಿಂಗ್ ಮಾಡಿದರು. ವೇಗದ ಶತಕ ಬಾರಿಸಿದ ಹೆಡ್, ಅದನ್ನು ವಿನೂತನವಾಗಿ ಆಚರಿಸಿದರು. ಹೆಲ್ಮೆಟ್ ಕಳಚಿ, ಅದನ್ನು ಬ್ಯಾಟ್ ಹಿಡಿಗೆ ಸಿಲುಕಿಸಿ ವಿನೂತನವಾಗಿ ಆಚರಣೆ ಮಾಡಿದರು. ಇದನ್ನು ನೋಡಿದವರು ಏನಿದರ ಅರ್ಥ ಎಂದು ಚಿಂತಿಸುತ್ತಿದ್ದಾರೆ. ಆದರೆ, ಇದೇ ರೀತಿಯ ಆಚರಣೆಯನ್ನು ಮೊದಲು ಮಾಡಿದ್ದು, ಹೆಡ್ ಅಲ್ಲ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್.
ಹೌದು, ಕ್ರಿಸ್ ಗೇಲ್ ಶತಕ ಬಾರಿಸಿದ ನಂತರ ಇದೇ ರೀತಿ ಸಂಭ್ರಮಿಸುತ್ತಿದ್ದರು. ಅದನ್ನೇ ಈಗ ಹೆಡ್ ಮರು ಆಚರಿಸಿದ್ದಾರೆ. ಆದರೆ, ಇದರ ಹಿಂದೆ ಒಂದು ಕಾರಣವಿದೆ. ಹೆಡ್ ಅವರು ಹಿಂದೊಮ್ಮೆ ಆರ್‌ಸಿಬಿ ಪರ ಆಡಿದ್ದರು. ಆದರೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಮುಂದಿನ ಸೀಸನ್ನಲ್ಲಿ ಅವರನ್ನು ತಂಡದಿಂದ ತೆಗೆದುಹಾಕಲಾಯಿತು. ಈ ಸೇಡನ್ನು ನಿನ್ನೆ ಹೆಡ್ ತೀರಿಸಿಕೊಂಡಿದ್ದಾರೆ. ಅದೂ ಕೂಡ ಬೆಂಗಳೂರಿನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಅಷ್ಟೇ ಏಕೆ ಈ ಶತಕದ ನಂತರ ಆ ತಂಡದ ಮಾಜಿ ಬ್ಯಾಟ್ಸ್ಮನ್ ಗೇಲ್ ಅವರನ್ನು ಅನುಕರಿಸುವ ಮೂಲಕ ಆರ್ಸಿಬಿಗೆ ತಿರುಗೇಟು ನೀಡಿದರು. ಹೆಡ್ ಅವರ ಆಚರಣೆಯ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮಾಡಿ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸನರೈಸರ್ಸ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮ (34) ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಹೆನ್ರಿಕ್ ಕ್ಲಾಸೆನ್ ಅರ್ಧಶತಕದ ಬಲದಿಂದ 3 ವಿಕೆಟ್ಗೆ 287 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಫಾಫ್ ಡು ಪ್ಲೆಸಿಸ್ (62 ರನ್, 28 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (42 ರನ್, 20 ಎಸೆತ, 6 ಬೌಂಡರಿ, 2 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ಹಾಗೂ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ (83 ರನ್,35 ಎಸೆತ, 5 ಬೌಂಡರಿ, 7 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ ಆರ್‌ಸಿಬಿ ತಂಡ 7 ವಿಕೆಟ್ಗೆ 262 ರನ್ಗಳಿಸಲಷ್ಟೇ ಶಕ್ತವಾಯಿತು. ಇದು ಐಪಿಎಲ್ನಲ್ಲಿ ಚೇಸಿಂಗ್ ವೇಳೆ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತದ ದಾಖಲೆಯಾಗಿದೆ. (ಏಜೆನ್ಸೀಸ್)