

Tilak Varma: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಸತತ ಮೂರನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದ ಸೂರ್ಯಕುಮಾರ್ ಯಾದವ್ ಪಡೆಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಈ ಪಂದ್ಯದಲ್ಲಿ ಭಾರತಕ್ಕೆ ಆಪತ್ಬಾಂಧವನಾಗಿ ಮಿಂಚಿದ ತಿಲಕ್ ವರ್ಮಾಗೆ ಇದೀಗ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ಲಭಿಸಿದೆ.
ಫೈನಲ್ ಗೆದ್ದ ಬಳಿಕ ತಂಡದೊಂದಿಗೆ ಕೆಲ ಸಮಯ ಕಳೆದ ತಿಲಕ್, ಇಂದು ಬೆಳಗ್ಗೆ ತಮ್ಮ ಹುಟ್ಟೂರು ಹೈದರಾಬಾದ್ಗೆ ಮರಳಿದರು. ಅಪಾರ ಸಂಖ್ಯೆಯಲ್ಲಿ ತಮಗೆ ಭವ್ಯ ಸ್ವಾಗತ ಕೋರಿದ ಅಭಿಮಾನಿಗಳು ಮತ್ತು ಕುಟುಂಬಸ್ಥರಿಗೆ ಧನ್ಯವಾದ ಅರ್ಪಿಸಿದ ತಿಲಕ್, ಪಾಕಿಸ್ತಾನಿ ಆಟಗಾರರು ತಮ್ಮನ್ನು ಔಟ್ ಮಾಡಲು ಏನೆಲ್ಲ ಪ್ರಯತ್ನ ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು.
ಹೈದರಾಬಾದ್ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತಿಲಕ್, "ಕ್ರಿಕೆಟ್ ಅನ್ನು ಭಾವನಾತ್ಮಕವಾಗಿ ಪರಿಗಣಿಸಬೇಡಿ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರರು ನನ್ನನ್ನು ಕೆರಳಿಸಲು ಪ್ರಯತ್ನಿಸಿದರು. ನನ್ನ ವಿಕೆಟ್ ಪಡೆಯಲು ಒತ್ತಡ ಹೇರಲು ಮುಂದಾದರು. ಆದರೆ, ಅವರ ಪ್ರಯತ್ನಗಳ್ಯಾವುದು ನನಗೆ ಒತ್ತಡ ಅನಿಸಲಿಲ್ಲ. ನನ್ನ ಕಣ್ಣ ಮುಂದೆ ಕೇವಲ ಭಾರತ ಮಾತ್ರ ಕಾಣಿಸುತ್ತಿತ್ತು. ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿತ್ತು" ಎಂದರು.
"ಕೊನೆಯವರೆಗೂ ಆ ಆತ್ಮವಿಶ್ವಾಸದಿಂದಲೇ ಆಡಿದೆ. ಏಷ್ಯಾಕಪ್ ಗೆದ್ದಿದ್ದು ಅತೀವ ಸಂತೋಷ ತಂದಿದೆ. ಈ ಗೆಲುವು ನಮ್ಮ ಯೋಧರಿಗೆ ಸಮರ್ಪಿಸಲಾಗಿದೆ. ಜನವರಿಯಲ್ಲಿ ವಿಶ್ವಕಪ್ ಟೂರ್ನಿ ಬರುತ್ತಿದೆ. ಸದ್ಯಕ್ಕೆ ಅದೇ ನನ್ನ ಗುರಿ" ಎಂದು ಹೇಳಿದರು,(ಏಜೆನ್ಸೀಸ್).