

Asia Cup: ಏಷ್ಯಾ ಕಪ್ ಟಿ20 ಫೈನಲ್ ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಟ್ವೀಟ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಮಾಡಿದ ಪೊಸ್ಟ್ ರೀಟ್ವೀಟ್ ಮಾಡಿರುವ ಖೇರಾ, ಕ್ರಿಕೆಟ್ ಪಂದ್ಯವನ್ನು ಯುದ್ಧಭೂಮಿಗೆ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.
ಪ್ರಧಾನಿ ಭಾರತ ತಂಡವನ್ನು ನೋಡಿ ಕಲಿಯಬೇಕಿದೆ, ಗೆಲುವಿನ ಸಮೀಪದಲ್ಲಿರುವಾಗ, ಉತ್ತಮ ನಾಯಕರಾದವರು, ಮೂರನೇ ಅಂಪೈರ್ ಆದೇಶದ ಮೇರೆಗೆ ಗುಂಡಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದರು.
ಆಟದ ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ, ಭಾರತ ಗೆದ್ದಿದೆ! ನಮ್ಮ ಆಟಗಾರರಿಗೆ ಅಭಿನಂದನೆಗಳು ಎಂಬ ಮೋದಿ ಪೋಸ್ಟ್‌ಗೆ, ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯೆ ನೀಡಿದ್ದರು.
ಪಾಕಿಸ್ತಾನದ ಕೋರಿಕೆಯ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಅನೇಕ ಸಚಿವರು ಹೇಳಿದರು ಸಹ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿಯಾದಾಗ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸಿದರು. ಟ್ರಂಪ್ ಹೇಳಿಕೆಗಳನ್ನು ಪದೇ ಪದೇ ಉಲ್ಲೇಖಿಸುತ್ತಿರುವ ಕಾಂಗ್ರೆಸ್, ಪಾಕ್ನ ಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಅಮೆರಿಕದ ಮುಖ್ಯಸ್ಥರ ಬೇಡಿಕೆಗಳಿಗೆ ಮಣಿದಿದ್ದಾರೆ ಎಂದು ಆರೋಪಿಸಿತು. ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಕ್ಪಾಲ್ ಕೂಡ ಪ್ರಧಾನಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಮೋದಿ ಗಾಳಿ, ನೀರು ಮತ್ತು ಕ್ರೀಡೆ ಎಲ್ಲದರಲ್ಲೂ ರಾಜಕೀಯವನ್ನು ಎಳೆದು ತರುತ್ತಾರೆ. ಭಾರತ ತಂಡದ ಗೆಲುವಿನ ಬಗ್ಗೆ ನಮಗೂ ಹೆಮ್ಮೆ ಇದೆ, ಆದರೆ, ನಾವು ಮೊದಲ ಬಾರಿಗೆ ಏಷ್ಯಾ ಕಪ್ ಗೆದ್ದಿಲ್ಲ. ದೇಶಕ್ಕೆ ತನ್ನದೆ ಆದ ಘನತೆ ಇದೆ ಎಂದರು.
ಶಿವಸೇನಾ ಟೀಕೆ..
ಪಾಕಿಸ್ತಾನದ ವಿರುದ್ಧ ಭಾರತದ ಏಷ್ಯಾ ಕಪ್ ವಿಜಯವನ್ನು ಆಪರೇಷನ್ ಸಿಂಧೂರ್ ಜೊತೆ ಹೋಲಿಕೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟೀಕಿಸಿದ್ದಾರೆ. ಪಂದ್ಯಾವಳಿಯ ಸಂಪೂರ್ಣ ಆದಾಯವನ್ನು ಗಡಿಯುದ್ದಕ್ಕೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಬಳಸಬಹುದೆಂದು ಎಚ್ಚರಿಸಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳು ನಡೆಯಬಾರದಿತ್ತು, ಪಿಸಿಬಿಯ ಲಾಭಕ್ಕಾಗಿ ಬಿಸಿಸಿಐ ಈ ಪಂದ್ಯಗಳನ್ನು ಆಡಿದೆ ಎಂದರು.
ಕಾಂಗ್ರೆಸ್ ಪಾಕ್ ಅನುಮತಿಗಾಗಿ ಕಾಯುತ್ತಿದೆ..
ಭಾರತ ಏಷ್ಯಾಕಪ್ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡದಿದ್ದಕ್ಕಾಗಿ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂಸದ ಅಮಿತ್ ಮಾಳವೀಯ, ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅದ್ಭುತ ಗೆಲುವು ರಾಹುಲ್ ಗಾಂಧಿ ಮತ್ತು ಇಡೀ ಕಾಂಗ್ರೆಸ್ ಅನ್ನು ಕೋಮಾ ಸ್ಥಿತಿಯಲ್ಲಿಟ್ಟಂತೆ ಕಾಣುತ್ತಿದೆ. ಆಪರೇಷನ್ ಸಿಂಧೂರ್ ನಂತರ, ಭಾರತೀಯ ಸೇನೆಯ ಅದ್ಭುತ ದಾಳಿಗಾಗಿ ಅಭಿನಂದಿಸಲು ಸಿದ್ಧರಿಲ್ಲದವರು, ಈಗ ಭಾರತೀಯ ಕ್ರಿಕೆಟ್ ತಂಡದ ಯಶಸ್ಸನ್ನು ಸಂಭ್ರಮಿಸಲು ಪಾಕಿಸ್ತಾನದಲ್ಲಿರುವವರ ಅನುಮತಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ ಎಂದಿದ್ದಾರೆ. ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿ ಏಷ್ಯಾಕಪ್ ಚಾಂಪಿಯನ್ ಆಗಿರುವ ನಮ್ಮ ತಂಡವನ್ನು ಅಭಿನಂದಿಸಿದ ಕಾಂಗ್ರೆಸ್‌ನ ಒಂದೇ ಒಂದು ಪೋಸ್ಟ್ ಕೂಡ ಬಂದಿಲ್ಲ. ಪಾಕಿಸ್ತಾನ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಒಂದೇ ಬದಿಯಲ್ಲಿವೆ ಎಂದು ಹೇಳಿದರು.
ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಭಾರತ ಪ್ರಶಸ್ತಿ ಗೆದ್ದುಕೊಂಡಿತು.(ಏಜೆನ್ಸೀಸ್)