"ಪಲ್ಲಂಗ ಕೇಳಿದ್ರೆ ಕೊಡಲು ಸಾಧ್ಯವಿಲ್ಲ"! ಕೋರ್ಟ್​ನಲ್ಲಿ ಕಾವೇರಿದ ವಾದ-ಪ್ರತಿವಾದ; ದರ್ಶನ್​ ಪರ ವಕೀಲ ಹೇಳಿದ್ದಿಷ್ಟು | Darshan Case

actor darshan bail postponed
Published on

Darshan Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್​, ಜೈಲಿನಲ್ಲಿ ದಿಂಬು, ಹಾಸಿಗೆ ಕೊಡದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಆರಂಭಗೊಂಡಿದೆ.

ದರ್ಶನ್​ ಪರ ವಕೀಲರ ವಾದ

ದರ್ಶನ್​ ಪರ ವಾದ ಆರಂಭಿಸಿದ ವಕೀಲ ಸುನೀಲ್​, "ಈಗಲೂ ದರ್ಶನ್​ರನ್ನು ಕ್ವಾರೆಂಟೈನ್​ ಸೆಲ್​ನಲ್ಲಿಟ್ಟಿದ್ದಾರೆ. ಇಡೀ ದೇಶದಲ್ಲಿ ಪಾಲನೆಯಾಗದ ನಿಯಮವನ್ನು ದರ್ಶನ್​ಗೆ ಮಾತ್ರ ಅನ್ವಯಿಸಿದ್ದಾರೆ. ಕೇವಲ 14 ದಿನ ಮಾತ್ರ ಕ್ವಾರೆಂಟೈನ್​ ಸೆಲ್​ನಲ್ಲಿಡಬಹುದು. ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ ಎನ್ನುವಂತೆ ಮಾಡಿದ್ದಾರೆ. ಎಸ್​ಪಿಪಿ ಹೇಗಿರಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ​. ನಾವೇನು ಚಿನ್ನದ ಮಂಚ ಕೇಳಿಲ್ಲ. ಹಾಸಿಗೆ ಕೊಡಿ ಎಂದಷ್ಟೇ ಕೇಳಿದ್ದೇವೆ. ಕೋರ್ಟ್​ ಆದೇಶವನ್ನು ಪಾಲಿಸದೆ ಇದ್ದಾಗ ನೋವಾಗುತ್ತದೆ" ಎಂದು ವಾದಿಸಿದರು.

ಎಸ್​ಪಿಪಿ ಪ್ರಸನ್ನಕುಮಾರ್​ ಪ್ರತಿವಾದ

ಪ್ರತಿವಾದ ಮಂಡಿಸಿದ ಎಸ್​ಪಿಪಿ ಪ್ರಸನ್ನಕುಮಾರ್, "ಕ್ವಾರೆಂಟೈನ್​ ಸೆಲ್​ನಲ್ಲಿರಲು ಅವಕಾಶವಿದೆ. ಚಿನ್ನದ ಮಂಚ ಕೊಡಲು ಸಾಧ್ಯವಿಲ್ಲ. ಏನು ಕೊಟ್ಟಿಲ್ಲ, ಏನು ಕೊಡಬೇಕು ಎಂಬುದನ್ನು ಅವರೇಳಲಿ. ಕ್ವಾರೆಂಟೈನ್ ಸೆಲ್​ ಕೂಡ ಜೈಲಿನ ಒಂದು ಭಾಗವೇ. ರಾಜ್ಯದ ಜೈಲು ನಿಯಮದಲ್ಲಿ ಎರಡು ವರ್ಗವಿದೆ. ವಿಶೇಷ ಹಾಗೂ ಸಾಮಾನ್ಯ ಎಂಬ 2 ವರ್ಗ ಇದೆ. ಕೈದಿಗಳಿಗಿರುವ ಭದ್ರತಾ ರಿಸ್ಕ್​ಗಳನ್ನು ಗಮನಿಸಿ ಸೆಲ್​ ನೀಡಲಾಗುತ್ತದೆ. ಆದರೆ, ಅಪರಾಧಿಗಳಿಗೆ ಮಾತ್ರ ಎ,ಬಿ, ಸಿ ಎಂಬ ವರ್ಗೀಕರಣವಿದೆ" ಎಂದು ಹೇಳಿದರು.

ಆದೇಶ ಕಾಯ್ದಿರಿಸಿದ ಕೋರ್ಟ್​

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅಕ್ಟೋಬರ್​ 09ಕ್ಕೆ ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net