

ಬೆಂಗಳೂರು: ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್ಮನ್, ಬೌಲರ್, ಕೀಪರ್ ಅಥವಾ ಫೀಲ್ಡರ್ ತಮ್ಮ ಅತ್ಯಾಕರ್ಷಕ ಪರ್ಫಾರ್ಮೆನ್ಸ್ನಿಂದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವುದಿದೆ. ಅಂದರೆ, ಒಂದೊಳ್ಳೆಯ ಶಾಟ್, ಬೌಲಿಂಗ್, ಕೀಪಿಂಗ್ ಅಥವಾ ಅದ್ಭುತವಾಗಿ ಒಂದು ಕ್ಯಾಚ್ ಮೂಲಕ ಆಟಗಾರರು ನೋಡುಗರಿಗೆ ವ್ಹಾ ಅನಿಸುವಂತೆ ಮಾಡುವುದಿದೆ.
ಫಾರ್ ಎ ಚೇಂಜ್.. ಇಲ್ಲಿ ಅಂಥದ್ದೊಂದು ಪರ್ಫಾರ್ಮೆನ್ಸ್ ಅಂಪೈರ್ ತೋರಿಸಿದ್ದಾರೆ. ಇಲ್ಲಿ ಅಂಪೈರ್ವೊಬ್ಬರು ವೈಡ್ಬಾಲ್ಗೆ ತಲೆಕೆಳಗಾಗಿ ಬಿಟ್ಟಿದ್ದಾರೆ. ಅರ್ಥಾತ್, ಬೌಲರ್ ವೈಡ್ ಹಾಕಿದ್ದನ್ನು ಈ ಅಂಪೈರ್ ಯಾರೂ ಊಹಿಸಿರದ ರೀತಿಯಲ್ಲಿ ನಿರ್ಣಯ ತೋರಿಸಿದ್ದಾರೆ. ಬೌಲರ್ ಎಸೆತ ವೈಡ್ ಆದ ತಕ್ಷಣ ಈ ಅಂಪೈರ್ ಎರಡೂ ಕೈಗಳನ್ನೂ ಪಕ್ಕಕ್ಕೆ ಸರಿಸಿ ವೈಡ್ ತೋರಿಸುವ ಬದಲು ಎರಡೂ ಕೈಗಳನ್ನೂ ನೆಲಕ್ಕೆ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಾಲನ್ನು ಮೇಲೆತ್ತಿ ಕೈಗಳ ರೀತಿಯಲ್ಲೇ ಅಗಲಿಸಿ ವೈಡ್ ಎಂದು ತೋರಿಸಿದ್ದಾರೆ.
ಅಂಪೈರ್ ಹೀಗೆ ವಿಶಿಷ್ಟವಾಗಿ ವೈಡ್ ತೋರಿದ ದೃಶ್ಯದ ವಿಡಿಯೋ ತುಣುಕನ್ನು ಸಾರಂಗ್ ಭಲೇರಾವ್ ಎನ್ನುವವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಹಂಚಿಕೊಂಡಿರುವ ಈ ವಿಡಿಯೋ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಟ್ವೀಟನ್ನು 9 ಸಾವಿರಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದು, 1200ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ.
'ಯೋಗ ಮತ್ತು ಕ್ರಿಕೆಟ್ ಭೇಟಿಯಾದಾಗ..' ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಇದನ್ನು ರಿಟ್ವೀಟ್ ಮಾಡಿಕೊಂಡಿದ್ದರೆ, ಇನ್ನು ಹಲವರು ಇದಕ್ಕೆ ವಿಶೇಷವಾದ ಪ್ರತಿಕ್ರಿಯೆ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ ಈ ಅಂಪೈರ್ ಹೆಸರು ಡಿಎನ್ ರಾಕ್. ನ. 21 ರಂದು ಮಹಾರಾಷ್ಟ್ರದ ಥಾಣೆಯ ಬೊಪ್ಗಾವ್ನಲ್ಲಿ ನಡೆದ ಪುರಂದರ ಪ್ರೀಮಿಯರ್ ಲೀಗ್ನ ಫೈನಲ್ನಲ್ಲಿ ಈ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ.