

ನವದೆಹಲಿ: ಟೀಮ್ ಇಂಡಿಯಾಗೆ ಪ್ರವೇಶ ಮಾಡಿ ಒಂಬತ್ತು ವರ್ಷಗಳಾದರೂ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ( Sanju Samson ) ತಂಡದ ಅತಿಥಿ ಕ್ರಿಕೆಟ್ ತಾರೆಯಾಗಿದ್ದಾರೆ. ಈ ಮಲಯಾಳಿ ಆಟಗಾರ ತಂಡದ ಖಾಯಂ ಸದಸ್ಯನಾಗಲು ನಿರಂತವಾಗಿ ಪ್ರಯತ್ನಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ನಿವೃತ್ತಿ ಘೋಷಣೆ ಮಾಡಿದ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಸಂಜು ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಮೂಲಕ ಮತ್ತೊಮ್ಮೆ ಪರೀಕ್ಷೆಗೆ ಸಿದ್ಧರಾದರು.
ಮೊದಲ ಪಂದ್ಯದಲ್ಲಿ ಸಂಜು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಭಿಷೇಕ್ ಶರ್ಮ ಅವರೊಂದಿಗೆ ಬ್ಯಾಟಿಂಗ್ ಮಾಡಿದ ಸಂಜು 19 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ನಡುವೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಸಂಜು ಅವರ ಆಟವನ್ನು ಟೀಕಿಸಿದ್ದಾರೆ.
ಸಂಜು ಓರ್ವ ಮಹಾನ್ ಆಟಗಾರ. ಆದರೆ, ನಾನು ಈ ವಿಚಾರವನ್ನು ಹೇಳಲೇಬೇಕು. ಸಂಜು ಅವರು ಸ್ವಲ್ಪ ಮುಂದೆ ಸಾಗಬೇಕಿದೆ ಮತ್ತು ಇನ್ನೂ ಕೆಲವು ರನ್ ಗಳಿಸಬೇಕಿದೆ. ಇಲ್ಲದಿದ್ದಲ್ಲಿ ಸಂಜು ವೃತ್ತಿಜೀವನಕ್ಕೆ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಜು ಅವರು ಬಹಳ ಸಮಯದಿಂದ ತಂಡದಲ್ಲಿ ಒಳಗೆ ಮತ್ತು ಹೊರಗೆ ಇದ್ದಾರೆ. ಬಾಂಗ್ಲಾ ವಿರುದ್ಧ ಅವರು ಆಡಿದ ಮೊದಲ ಪಂದ್ಯ ಅಲ್ಪ ಇನಿಂಗ್ಸ್ ಆಗಿತ್ತು. ತಂಡದಲ್ಲಿ ಉಳಿಯಲು ಇದು ಸಾಕಾಗುವುದಿಲ್ಲ. ದೆಹಲಿಯಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿ ಇನ್ನೂ ಕೆಲವು ರನ್ ಗಳಿಸಬೇಕು. ಕನಿಷ್ಠ ಅವರು ಹೈದರಾಬಾದ್ನಲ್ಲಿ ಉತ್ತಮ ಅಂಕಗಳನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಆಯ್ಕೆಗಾರರು ಅವರನ್ನು ಮರೆತುಬಿಡುತ್ತಾರೆ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಗ್ವಾಲಿಯರ್ನ ನೂತನ ಶ್ರೀಮಂತ್ ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ (ಅ.06) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (35*ರನ್, 32 ಎಸೆತ,3 ಬೌಂಡರಿ) ಆಸರೆಯಲ್ಲಿ 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (39*ರನ್, 16 ಎಸೆತ, 5 ಬೌಂಡರಿ, 2ಸಿಕ್ಸರ್) ಬಿರುಸಿನಾಟದ ಬಲದಿಂದ ಟೀಮ್ ಇಂಡಿಯಾ 11.5 ಓವರ್ಗಳಲ್ಲಿ 3 ವಿಕೆಟ್ಗೆ 132 ರನ್ಗಳಿಸಿ ಇನ್ನೂ 49 ಎಸೆತ ಇರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.
ವೇಗಿ ಅರ್ಷದೀಪ್ ಸಿಂಗ್ (14ಕ್ಕೆ 3) ಹಾಗೂ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (31ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ಬಲದಿಂದ ಯುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 7 ವಿಕೆಟ್ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್)