ಹಾರ್ದಿಕ್​ ಏನಿದು? ಈ ರೀತಿಯೂ ಆಡಬಹುದೇ? ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ | Hardik Pandya

Hardik Pandya
Published on

ನವದೆಹಲಿ: ಟೀಮ್​ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಫುಲ್​ ಫಾರ್ಮ್​ನಲ್ಲಿದ್ದಾರೆ. ಭಾರತ ತಂಡ ಟಿ20 ವಿಶ್ವಕಪ್-2024 ಗೆಲುವಿನಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕಿರು ವಿಶ್ವಕಪ್​ ಮೆಗಾ ಟೂರ್ನಮೆಂಟ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಫೈನಲ್​ನಲ್ಲಿ ಸೂಪರ್ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾವನ್ನು ನಡುಗಿಸಿದ್ದರು. ಇದೀಗ ಹಾರ್ದಿಕ್ ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಭಾನುವಾರ (ಅ. 06) ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ( Hardik Pandya )​ ಅವರು ಆಲ್​ರೌಂಡ್ ಪ್ರದರ್ಶನದ ಮೂಲಕ ತಮ್ಮ ಪ್ರಭಾವ ಬೀರಿದ್ದಾರೆ. ಅದರಲ್ಲೂ ಹಾರ್ದಿಕ್ ಹೊಡೆದ ಶಾಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಗ್ವಾಲಿಯರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದರು. 11ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಬಾಂಗ್ಲಾ ಬೌಲರ್ ರಿಷಾದ್ ಹೊಸೇನ್​ಗೆ ಸೂಪರ್ ಸಿಕ್ಸರ್ ಬಾರಿಸಿದರು. ಇದಾದ ನಂತರ ತಸ್ಕಿನ್ ಅಹ್ಮದ್ ಎಸೆದ 12ನೇ ಓವರ್​ನ ಮೂರನೇ ಎಸೆತದಲ್ಲಿ ಹಾರ್ದಿಕ್ ಅದ್ಭುತ ಶಾಟ್ ಆಡಿದರು. 'ನೋ-ಲುಕ್' ಶಾಟ್ ಆಡಿದಾಗ ಚೆಂಡು ಕೀಪರ್ ತಲೆಯ ಮೇಲೆ ಬೌಂಡರಿ ಗೆರೆಯನ್ನು ದಾಟಿತು.

ಈ ಶಾಟ್​ ಹೊಡೆದ ನಂತರ ಹಾರ್ದಿಕ್ ಕೂಡ ಚೆಂಡನ್ನು ನೋಡಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾರ್ದಿಕ್ ಹೊಡೆತ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏನಿದು ಹಾರ್ದಿಕ್? ಹೀಗೂ ಶಾಟ್ ಆಡಬಹುದೇ? ಎಂಬ ಕಾಮೆಂಟ್​ಗಳು ಬರುತ್ತಿವೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಗ್ವಾಲಿಯರ್​ನ ನೂತನ ಶ್ರೀಮಂತ್ ಮಾಧವ್‌ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (35*ರನ್, 32 ಎಸೆತ,3 ಬೌಂಡರಿ) ಆಸರೆಯಲ್ಲಿ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (39*ರನ್, 16 ಎಸೆತ, 5 ಬೌಂಡರಿ, 2ಸಿಕ್ಸರ್) ಬಿರುಸಿನಾಟದ ಬಲದಿಂದ ಟೀಮ್ ಇಂಡಿಯಾ 11.5 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ಗಳಿಸಿ ಇನ್ನೂ 49 ಎಸೆತ ಇರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.

ವೇಗಿ ಅರ್ಷದೀಪ್ ಸಿಂಗ್ (14ಕ್ಕೆ 3) ಹಾಗೂ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (31ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ಬಲದಿಂದ ಯುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 7 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net