

ಗ್ವಾಲಿಯರ್: ವೇಗಿ ಅರ್ಷದೀಪ್ ಸಿಂಗ್ (14ಕ್ಕೆ 3) ಹಾಗೂ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (31ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ಬಲದಿಂದ ಯುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 7 ವಿಕೆಟ್ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ನೂತನ ಶ್ರೀಮಂತ್ ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (35*ರನ್, 32 ಎಸೆತ,3 ಬೌಂಡರಿ) ಆಸರೆಯಲ್ಲಿ 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (39*ರನ್, 16 ಎಸೆತ, 5 ಬೌಂಡರಿ, 2ಸಿಕ್ಸರ್) ಬಿರುಸಿನಾಟದ ಬಲದಿಂದ ಟೀಮ್ ಇಂಡಿಯಾ 11.5 ಓವರ್ಗಳಲ್ಲಿ 3 ವಿಕೆಟ್ಗೆ 132 ರನ್ಗಳಿಸಿ ಇನ್ನೂ 49 ಎಸೆತ ಇರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.
ಚಕ್ರವರ್ತಿ ಯಶಸ್ವಿ ಕಂಬ್ಯಾಕ್: 2021ರ ನವೆಂವರ್ ಬಳಿಕ ಟೀಮ್ ಇಂಡಿಯಾ ಪರ ಆಡಿದ ತಮಿಳುನಾಡಿನ ವರುಣ್ ಚಕ್ರವರ್ತಿ ಟಿ20ಯಲ್ಲಿ ವೈಯಕ್ತಿಕ ಶೇಷ್ಠ ಬೌಲಿಂಗ್ ನಡೆಸಿದರು. ಪವರ್ ಪ್ಲೇಯಲ್ಲಿ ದಾಳಿಗಿಳಿದ ವರುಣ್ ತಾನೆಸೆದ ಮೊದಲ ಓವರ್ನಲ್ಲಿ 15 ರನ್ ನೀಡಿ ದುಬಾರಿ ಎನಿಸಿದರು. ಆದರೆ ಮರು ಓವರ್ನಲ್ಲಿ ನಜ್ಮೂಲ್ ಹಾಗೂ ತೌಹಿದ್ ಹೃದೊಯ್ ಜತೆಯಾಟಕ್ಕೆ ಬ್ರೇಕ್ ಹಾಕಿದರು. ಬಳಿಕ ಶಾಂಟೋ ಜತೆಯಾದ ಜಾಕಿರ್ ಅಲಿ (8) ಅವರನ್ನು ಇನಿಂಗ್ಸ್ನ 10ನೇ ಓವರ್ನಲ್ಲಿ ಕ್ಲೀನ್ ಬೌಲ್ಡ್ ಮಾಡಿ ನಿಯಂತ್ರಣ ಹೇರಿದರು. ಮೊದಲ ಓವರ್ ಬಳಿಕ ನಂತರ 3 ಮೂರು ಓವರ್ಗಳಲ್ಲಿ 16 ರನ್ ನೀಡಿದ ವರುಣ್ ಚಕ್ರವರ್ತಿ, 14ನೇ ಓವರ್ನಲ್ಲಿ ರಿಷಾದ್ ಹೊಸೈನ್ರನ್ನು (11) ಡಗೌಟ್ ಸೇರಿಸಿದರು. ಸ್ಲಾಗ್ ಓವರ್ಗಳಲ್ಲಿ ಮೆಹಿದಿ ಹಸನ್ ಮಿರಾಜ್ ಕೆಳಕ್ರಮಾಂಕದ ಬ್ಯಾಟರ್ಗಳ ಜತೆಗೂಡಿ ಏಕಾಂಗಿ ಹೋರಾಟದ ಮೂಲಕ ತಂಡದ ಮೊತ್ತ ಏರಿಸಿದರು.