

ನವದೆಹಲಿ: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋಲುಂಡಿತು. ಆದರೆ, ಚೇತರಿಸಿಕೊಂಡು ಎರಡನೇ ಪಂದ್ಯ ಗೆದ್ದು ಭರವಸೆ ಮೂಡಿಸಿತು. ಆದರೆ, ಡುಪ್ಲೆಸಿಸ್ ಪಡೆ ಸತತ 6 ಪಂದ್ಯಗಳಲ್ಲಿ ಸೋಲುವ ಮೂಲಕ ಒಂದು ಹಂತದಲ್ಲಿ ಟ್ರೋಫಿ ಗೆಲ್ಲುವ ಆಸೆಯನ್ನೇ ಕೈ ಚೆಲ್ಲಿತ್ತು. ಆದರೆ, ಪವಾಡವೆಂಬಂತೆ ಲೀಗ್‌ನ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ಆರ್‌ಸಿಬಿ ಸತತ 5 ಗೆಲುವಿನೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ. ಆದರೆ, ಪ್ಲೇ ಆಫ್‌ಗೆ ಆರ್‌ಸಿಬಿ ಅರ್ಹತೆ ಗಿಟ್ಟಿಸಿಕೊಳ್ಳಲು ಒಂದು ದೊಡ್ಡ ಅಡಚಣೆಯೇ ಇದೆ. ಆ ಅಡಚಣೆ ಏನೆಂಬುದನ್ನು ತಿಳಿಯೋಣ.
ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಪ್ಲೇಆಫ್ ತಲುಪಲು ನಿರ್ಣಾಯಕವಾಗಿದ್ದ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಸಿಎಸ್‌ಕೆ ತಂಡ ಟೇಬಲ್ ಟಾಪರ್ ರಾಜಸ್ಥಾನವನ್ನು ಸೋಲಿಸಿದರೆ, ಡುಪ್ಲೆಸಿಸ್ ಪಡೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತ ಅಧಿಕೃತವಾಗಿ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ಕೂಡ ಅರ್ಹತೆ ಪಡೆದಿದೆ.
ಉಳಿದ ಎರಡು ಸ್ಥಾನಗಳಿಗೆ ಸಿಎಸ್‌ಕೆ, ಎಸ್ಆರ್ಎಚ್, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲ್ಎಸ್ಜಿ ಸ್ಪರ್ಧಿಸುತ್ತಿವೆ. ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸು ಅವಕಾಶ ಉಳಿಸಿಕೊಂಡಿದೆ. ಆದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ ಇಡಬೇಕಾದರೆ, ಚೆನ್ನೈ ರೂಪದಲ್ಲಿರುವ ದೊಡ್ಡ ಅಡಚಣೆಯನ್ನು ದಾಟಬೇಕಾಗುತ್ತದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೋರಾಟ ನಿರ್ಣಾಯಕವಾಗಲಿದೆ.
ಆರ್‌ಸಿಬಿ ವಿರುದ್ಧ ಗೆದ್ದರೆ ಚೆನ್ನೈ ಸುಲಭವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಏಕೆಂದರೆ ಆ ತಂಡದ ನೆಟ್ ರನ್ ರೇಟ್ ಉತ್ತಮವಾಗಿದೆ. ಆದರೆ ಬೆಂಗಳೂರು ವಿಚಾರದಲ್ಲಿ ಆ ರೀತಿ ಇಲ್ಲ. ಆರ್‌ಸಿಬಿ ನೆಟ್ ರನ್ ರೇಟ್ ಕಡಿಮೆ ಇರುವ ಕಾರಣ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಿದೆ. ಆರ್‌ಸಿಬಿ ಚೇಸಿಂಗ್ ಮಾಡಿದ್ದಲ್ಲಿ ಪಂದ್ಯವನ್ನು 18.1 ಓವರ್‌ಗಳಲ್ಲಿ ಮುಗಿಸಬೇಕು. ಮೊದಲು ಬ್ಯಾಟ್ ಮಾಡಿದ್ದಲ್ಲಿ, ರುತುರಾಜ್ ಸೇನೆಯನ್ನು 18 ರನ್ಗಳಿಂದ ಸೋಲಿಸಬೇಕು.
ಚೆನ್ನೈ ತಂಡವನ್ನು ಸೋಲಿಸುವುದಷ್ಟೇ ಅಲ್ಲ, ಆ ತಂಡದ ನೆಟ್ ರನ್ ರೇಟ್ ದಾಟುವುದೂ ಬೆಂಗಳೂರಿನ ಮುಂದಿರುವ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ-ಸಿಎಸ್‌ಕೆ ಅತ್ಯಂತ ಕುತೂಹಲಕಾರಿ ಪಂದ್ಯವಾಗಲಿದೆ. (ಏಜೆನ್ಸೀಸ್)