18 ವರ್ಷಗಳಿಂದ ಕಪ್​ ಗೆದ್ದಿಲ್ಲ! ಆದ್ರೆ... ಆರ್​ಸಿಬಿ ಆಯ್ಕೆ ಕುರಿತು​ ಕೈಫ್​ ಮುಕ್ತ ಮಾತು | RCB Captain

ವಿಜಯವಾಣಿ - 2025-02-17T084251.412
Published on

RCB Captain: ಇದೇ ಮಾರ್ಚ್​ 22ರಿಂದ ಪ್ರಾರಂಭವಾಗಲಿರುವ ಐಪಿಎಲ್​ 18ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಶುರುವಾಗಿದೆ. ನಿನ್ನೆಯಷ್ಟೇ ಐಪಿಎಲ್​ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು​ ಮುಖಾಮುಖಿಯಾಗಲಿವೆ. ಇದು ಕ್ರಿಕೆಟ್ ಅಭಿಮಾನಿಗಳ ಕಾತರ, ಕುತೂಹಲವನ್ನು ದುಪ್ಪಟ್ಟಾಗಿಸಿದೆ. ಈ ಮಧ್ಯೆ ಆರ್​ಸಿಬಿಗೆ ನೂತನ ಕ್ಯಾಪ್ಟನ್​ ಆಗಿ ರಜತ್ ಪಾಟಿದಾರ್​ ಆಯ್ಕೆ ಆಗಿರುವುದು ಸದ್ಯ ತಂಡದ ಗೆಲುವಿನ ಬಗ್ಗೆ ಹಲವಾರು ಪ್ರಶ್ನೆಗಳು ಮುನ್ನೆಲೆಗೆ ತಂದಿದೆ.

ನಿರೀಕ್ಷೆಗಳು ದುಪ್ಪಟ್ಟು

2025ರ ಐಪಿಎಲ್​ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ನೂತನ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿರುವ ರಜತ್​ ಪಾಟೀದಾರ್​, ದೊಡ್ಡ ಜವಾಬ್ದಾರಿಯನ್ನೇ ತಮ್ಮ ಹೆಗಲಿಗೇರಿಸಿಕೊಂಡಿದ್ದಾರೆ. ಮಾಜಿ ಕ್ಯಾಪ್ಟನ್​, 'ರನ್​ ಮಷಿನ್'​ ವಿರಾಟ್​ ಕೊಹ್ಲಿಯೇ ಈ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತುಗಳಿತ್ತು. ಇದೇ ಸತ್ಯ ಎಂದು ನಂಬಲಾಗಿತ್ತು. ಆದ್ರೆ, ಅಂತಿಮವಾಗಿ ಅಭಿಮಾನಿಗಳ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಫ್ರಾಂಚೈಸಿ, ಕೊಹ್ಲಿ ಹೆಸರನ್ನು ಬದಿಗಿಟ್ಟು ರಜತ್​ರನ್ನು ತಮ್ಮ ಆಯ್ಕೆಯಾಗಿ ಅಧಿಕೃತ ಘೋಷಣೆ ಹೊರಡಿಸಿತು. ಇದು ವಿರಾಟ್​ ಅಭಿಮಾನಿಗಳ ಬಳಗಕ್ಕೆ ಅಚ್ಚರಿ ಉಂಟುಮಾಡಿದ್ದೇ ಆದರೂ ಗಟ್ಟಿಯಾದ ಭರವಸೆಯನ್ನು ತಂದುಕೊಟ್ಟಿದೆ.

ಕ್ಯಾಪ್ಟನ್​ ಆಯ್ಕೆ ಓಕೆ

ಇನ್ನು ರಜತ್ ಪಾಟಿದಾರ್​ರನ್ನು​ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ ಫ್ರಾಂಚೈಸಿಯ ನಿರ್ಧಾರ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಮೊಹಮ್ಮದ್​ ಕೈಫ್​, "ಹರಾಜಿನಲ್ಲಿ ಫಾಫ್​ರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದ್ದ ಆರ್​ಸಿಬಿ, ಖಂಡಿತವಾಗಿ ವಿರಾಟ್ ಅವರನ್ನೇ ಕ್ಯಾಪ್ಟನ್ ಆಗಿ ಮಾಡಲಿದೆ ಎಂದು ನಾನು ಭಾವಿಸಿದ್ದೆ. ನನ್ನ ಪ್ರಕಾರ, ಪ್ರಾಯಶಃ ನಾಯಕನ ವಿಚಾರಕ್ಕೆ ಸಂಬಂಧಿಸಿದಂತೆ ಕೊಹ್ಲಿ ಮ್ಯಾನೇಜ್​ಮೆಂಟ್​ ಜತೆಗೆ ಒಂದಷ್ಟು ಸಂಭಾಷಣೆ ನಡೆಸಿರಬಹುದು" ಎಂದರು.

ಕೊಹ್ಲಿ ಬ್ರ್ಯಾಂಡ್​

"ತಮ್ಮ ಬದಲಿಗೆ ರಜತ್​ ಪಾಟಿದಾರ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ ಎಂದರೆ ಖಂಡಿತವಾಗಿಯೂ ಇದರಲ್ಲಿ ಕೊಹ್ಲಿಯ ಕೈವಾಡವಿದೆ ಎಂದು ನಾನು ನಂಬುತ್ತೇನೆ. ಸತತ 18 ವರ್ಷಗಳಿಂದ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ. ಆದರೂ ಸಹ ಕೊಹ್ಲಿ ಇಷ್ಟು ವರ್ಷಗಳಿಂದ ಅದೇ ಫ್ರಾಂಚೈಸಿಯಲ್ಲಿದ್ದಾರೆ. ಟ್ರೋಫಿ ಇಲ್ಲದೆ ಹೋದರೂ ಅವರು ಸಾಕಷ್ಟು ಪ್ರಭಾವ, ಗೌರವ ಮತ್ತು ತಮ್ಮದೇ ಬ್ರ್ಯಾಂಡ್​ ಅನ್ನು ಸ್ಥಾಪಿಸಿದ್ದಾರೆ. ತಮ್ಮ ಬ್ಯಾಟ್​ನಿಂದ ಉತ್ತಮ ಕೊಡುಗೆ ನೀಡುವತ್ತ ಹೆಚ್ಚು ಗಮನ ಹರಿಸಿರುವ ವಿರಾಟ್​, ಯುವ ಆಟಗಾರನ ಕ್ಯಾಪ್ಟನ್ಸಿಯಲ್ಲಿ ಆಡುವ ಮೂಲಕ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ" ಎಂದು ಕೈಫ್ ತಮ್ಮ​ ಅಭಿಪ್ರಾಯವನ್ನು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net