

IPL 2026: ಐಪಿಎಲ್ 18ನೇ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಗೆಲುವಿನ ಮೂಲಕ ಅತ್ಯಂತ ಯಶಸ್ವಿ ಮುಕ್ತಾಯ ಕಂಡಿತು. ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆಯುವುದರ ಜೊತೆಗೆ ಬಿಸಿಸಿಐ ಅಂಗಳಕ್ಕೆ ಉತ್ತಮ ಆದಾಯ ಕೂಡ ತಂದುಕೊಟ್ಟಿತು. ಇದೀಗ ಮುಂದಿನ ಸೀಸನ್ ಮೇಲೆ ಭಾರೀ ನಿರೀಕ್ಷೆಗಳು ಮೂಡಿದ್ದು, ಯಾರೆಲ್ಲ ಈಗಿರುವ ಫ್ರಾಂಚೈಸಿ ತೊರೆಯಲಿದ್ದಾರೆ, ಬದಲಾವಣೆ ಮಾಡಿಕೊಳ್ಳಲಿದ್ದಾರೆ, ಮತ್ತು ನಿವೃತ್ತಿ ಘೋಷಿಸಲಿದ್ದಾರೆ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
2026ರ ಸೀಸನ್ ಆರಂಭಕ್ಕೆ ಇನ್ನೂ 8 ತಿಂಗಳು ಬಾಕಿ ಉಳಿದಿರುವಂತೆಯೇ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ. ಈಗಿರುವ 10 ಫ್ರಾಂಚೈಸಿಗಳು ಹೊಸ ಸೀಸನ್‌ಗೆ ಭರ್ಜರಿ ತಯಾರಿ ನಡೆಸುತ್ತಿವೆ. ಮಾಹಿತಿಗಳ ಪ್ರಕಾರ, ಸಂಜು ಸ್ಯಾಮ್ಸನ್ ಮತ್ತು ಇತರ ಇಬ್ಬರು ಸ್ಟಾರ್ ಆಟಗಾರರು ಮುಂಬರುವ ಸೀಸನ್‌ನಲ್ಲಿ ಫ್ರಾಂಚೈಸಿಗಳನ್ನು ಬದಲಾಯಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಸಂಜು ಸ್ಯಾಮ್ಸನ್: ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸುತ್ತಿರುವ ಸ್ಯಾಮ್ಸನ್, ಆರ್ಆರ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನಕ್ಕೆ ಬರುವ ಮುನ್ಸೂಚನೆ ಲಭಿಸಿದೆ. ವಿಕೆಟ್ ಕೀಪರ್, ಬ್ಯಾಟರ್ ಆಗಿ ಆಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಇನ್ನು ಸ್ಯಾಮ್ಸನ್ರನ್ನು ಟ್ರೇಡ್ ಮೂಲಕ ಖರೀದಿಸುವ ಬಗ್ಗೆ ಸಿಎಸ್‌ಕೆ ಆಲೋಚಿಸುತ್ತಿದೆ. ಈ ಬೆಳವಣಿಗೆ ಮುಂದಿನ ಸೀಸನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿ ಕಾಡುವ ಹಿನ್ನಲೆ ಬಂದಿದೆ. 2026ರ ಐಪಿಎಲ್‌ನಲ್ಲಿ ಕ್ಯಾಪ್ಟನ್ ಕೂಲ್ ಆಡುವುದು ಬಹುತೇಕ ಅನುಮಾನವಿದೆ. ಹೀಗಾಗಿ, ಸಿಎಸ್‌ಕೆ ಅನುಭವಿ ಮತ್ತು ವಿಶ್ವಾಸಾರ್ಹ ವಿಕೆಟ್ ಕೀಪರ್‌ಗಾಗಿ ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ ಇಶಾನ್, 14 ಪಂದ್ಯಗಳಲ್ಲಿ 354 ರನ್ ಗಳಿಸಿದರು. ಇದರಲ್ಲಿ ಒಂದು ಶತಕವೂ ಸೇರಿದೆ. ವರದಿಗಳ ಪ್ರಕಾರ, ಮುಂಬರುವ ಆವೃತ್ತಿಯಲ್ಲಿ ಕಿಶನ್, ಕೆಕೆಆರ್ ಪರ ಆಡುವ ಸಾಧ್ಯತೆಗಳು ಹೆಚ್ಚಿವೆ. ಕೆಕೆಆರ್ ತಮ್ಮ ಬ್ಯಾಟಿಂಗ್ ಲೈನ್ಅಪ್ ಅನ್ನು ಇನ್ನಷ್ಟು ಬಲಪಡಿಸಲು ಎದುರುನೋಡುತ್ತಿದೆ. ಮತ್ತು ಉತ್ತಮ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ. ಈ ಪ್ರಕ್ರಿಯೆಯಲ್ಲಿ ಕಿಶನ್ರನ್ನು ಟ್ರೇಡ್ ವಿಂಡೋ ಮೂಲಕ ಖರೀದಿಸುವ ನಿರೀಕ್ಷೆಯಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ರನ್ನು ಕೋಲ್ಕತ ನೈಟ್ ರೈಡರ್ಸ್, 23.75 ಕೋಟಿ ರೂ.ಗೆ ಖರೀದಿಸಿತು. ಆದಾಗ್ಯೂ, ಈ ಸೀಸನ್‌ನಲ್ಲಿ ಅಯ್ಯರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ಫ್ರಾಂಚೈಸಿಯ ಬೇಸರಕ್ಕೂ ಕಾರಣವಾಯಿತು. 21ರ ಸರಾಸರಿಯಲ್ಲಿ ಕೇವಲ 142 ರನ್ ಗಳಿಸಿರುವ ವೆಂಕಟೇಶ್ರನ್ನು ಮುಂದಿನ ಆವೃತ್ತಿಯಲ್ಲಿ ತಂಡದಿಂದ ಕೈಬಿಡಲು ಫ್ರಾಂಚೈಸಿ ಚಿಂತಿಸಿದೆ ಎಂಬ ವರದಿಗಳಿವೆ. ಅಷ್ಟಕ್ಕೂ, ಇವರೆಲ್ಲ ಈಗಿರುವ ಫ್ರಾಂಚೈಸಿಯನ್ನು ಬಿಡಲಿದ್ದಾರೆಯೇ? ಬಿಟ್ಟರೆ ಯಾವ ತಂಡ ಸೇರಿಕೊಳ್ಳಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).