ಟೀಮ್​ ಇಂಡಿಯಾವನ್ನು ಸೋಲಿಸಲು ಸಾಕಷ್ಟು ಡೇಟಾ ಇದೆ; ಪಂದ್ಯಕ್ಕೂ ಮುನ್ನ ಅಚ್ಚರಿಯ​ ಹೇಳಿಕೆ ನೀಡಿದ ಐರ್ಲೆಂಡ್​ ಕೋಚ್

Gary Wilson
Published on

ಯುಎಸ್​ಎ: ಜೂನ್​ 01ರಂದು ಬಾಂಗ್ಲದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 60ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಚುಟುಕು ವಿಶ್ವ ಸಮರದಲ್ಲಿ ಭರ್ಜರಿ ಪ್ರದರ್ಶನ ನೀಡವುದಾಗಿ ಟೀಮ್​ ಇಂಡಿಯಾ ಎದುರಾಳಿ ತಂಡಗಳಿಗೆ ಸಂದೇಶ ರವಾನಿಸಿದೆ. 2013ರ ನಂತರ ಟೀಮ್​ ಇಂಡಿಯಾ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಭಾರತದ ಪಾಲಿಗೆ ಐಸಿಸಿ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ. ಈ ಬಾರಿಯಾದರೂ ಕಪ್​ ಗೆಲ್ಲುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದು, ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಜೂನ್ 05) ಪಂದ್ಯ ನಡೆಯಲಿದೆ. ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಟೀಮ್​ ಇಂಡಿಯಾ ಎದುರು ನೋಡುತ್ತಿದೆ.

ಬಲಿಷ್ಠ ಭಾರತಕ್ಕೆ ಸವಾಲೊಡ್ಡಲು ಐರ್ಲೆಂಡ್ ಕೂಡ ಹವಣಿಸುತ್ತಿದೆ. ತಂಡದ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದ್ದು, ಪಂದ್ಯ ಕುತೂಹಲಕರವಾಗಿರುವುದು ಖಚಿತ. ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿರುತ್ತಾರೆ ಎಂಬ ಕುತೂಹಲವಿದೆ. ಇದರ ನಡುವೆಯೇ ಐರ್ಲೆಂಡ್​ ತಂಡದ ಬ್ಯಾಟಿಂಗ್​ ಕೋಚ್​ ಗ್ಯಾರಿ ವಿಲ್ಸನ್​ ಟೀಮ್​ ಇಂಡಿಯಾವನ್ನು ಎದುರಿಸಲು ತಮ್ಮ ತಂಡ ರೂಪಿಸಿರುವ ಯೋಜನೆಗಳ ಕುರಿತು ಮಾತನಾಡಿದ್ದಾರೆ.

ಟೀಮ್​ ಇಂಡಿಯಾ ಬಗ್ಗೆ ನಮಗೆ ಸಾಕಷ್ಟು ತಿಳಿದಿದೆ. ಅವರ ಬಗ್ಗೆ ಸಾಕಷ್ಟು ಡೇಟಾ ನಮ್ಮ ಬಳಿ ಇದೆ. ಅವರು ವಿಶ್ವದಾದ್ಯಂತ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಟೀಮ್​ ಇಂಡಿಯಾದಲ್ಲಿರುವ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು, ನಮ್ಮ ಬಳಿಯೂ ಉತ್ತಮ ಆಟಗಾರರಿದ್ದಾರೆ. ನಮ್ಮ ಟೀಮ್​ ಇಂಡಿಯಾ ಆಟಗಾರರ ಸಾಕಷ್ಟು ಡೇಟಾ ಇದ್ದು, ಪ್ರತಿ ಆಟಗಾರನಿಗೂ ಒಂದೊಂದು ಯೋಜನೆ ರೂಪಿಸಲಾಗಿದೆ.

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೂ ಒಂದೇ ಒಂದು ಪಂದ್ಯ ನಡೆದಿದ್ದು, ಈಗಲೇ ವಿಶ್ಲೇಷಿಸುವುದು ಕಷ್ಟವಾಗಿದೆ. ಟೀಮ್​ ಇಂಡಿಯಾ ವಿರುದ್ಧ ಆಡಬೇಕಾದರೆ ಆತ್ಮವಿಶ್ವಾಸ ಅತಿಮುಖ್ಯ ಪಾತ್ರ ವಹಿಸುತ್ತದೆ. ನಾವು ಯಾವುದೇ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬಹುದು ಎಂದು ನಮಗೆ ತಿಳಿದಿದೆ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ, ನಾವು ಉತ್ತಮ ಫಾರ್ಮ್​ನೊಂದಿಗೆ ಕಣಕ್ಕಿಳಿಯುತ್ತೇವೆ ಎಂದು ಐರ್ಲೆಂಡ್​ ಬ್ಯಾಟಿಂಗ್​ ಕೋಚ್​ ಗ್ಯಾರಿ ವಿಲ್ಸನ್​ ಟೀಮ್​ ಇಂಡಿಯಾವನ್ನು ಎದುರಿಸಲು ತಮ್ಮ ತಂಡ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net