

ಕೊಯಂಬತ್ತೂರು: 18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ. ಈ ಬಾರಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ಈ ಬಾರಿ ಅಂದುಕೊಂಡಂತೆ ಬಿಜೆಪಿ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿದ್ದು, ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಕೊಯಂಬತ್ತೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಅದೃಷ್ಟ ಅವರ ಕೈಯನ್ನು ಅಷ್ಟಾಗಿ ಹಿಡಿದಿಲ್ಲ. ಡಿಎಂಕೆ ಅಭ್ಯರ್ಥಿ ಪಿ. ಗಣಪತಿ ರಾಜ್ಕುಮಾರ್ ಎದುರು 73,696 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಇತ್ತ ಅಣ್ಣಾಮಲೈ ಸೋಲು ಖಚಿತವಾಗುತ್ತಿದ್ದಂತೆ ಡಿಎಂಕೆ ನಾಯಕರು ಮಟನ್ ಬಿರಿಯಾನಿ ಹಂಚಿ ಸಂಭ್ರಮಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಎಂಕೆ ಕಾರ್ಯಕರ್ತರು ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋವನ್ನು ನೇತುಹಾಕಿ ಮೆರವಣಿಗೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಮಟನ್ ಬಿರಿಯಾನಿ ಹಂಚಿ ಡಿಎಂಕೆ ನಾಯಕರು ಅಣ್ಣಾಮಲೈ ಸಿಂಘಂ ಅಲ್ಲಾ ಆಡು ಎಂದು ಲೇವಡಿ ಮಾಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಚಿತ್ರವೆಂದರೆ ಇಂದು (ಜೂನ್ 04) ಅಣ್ಣಾಮಲೈ ಅವರ ಜನ್ಮದಿನವೂ ಹೌದು. ಬಿಜೆಪಿಯಲ್ಲಿ ಈ ಬಾರಿ ಗೆಲ್ಲುವ ಕುದುರೆಯ ಪಟ್ಟಿಯಲ್ಲಿದ್ದ ಅಣ್ಣಾಮಲೈ ತಮ್ಮ ಹುಟ್ಟುಹಬ್ಬದಂದೇ ಸೋಲಿನ ರುಚಿ ನೋಡುವಂತಾಗಿದೆ.