

ನವದೆಹಲಿ: ಇಂಗ್ಲೆಂಡ್ನ ಲೆಜೆಂಡರಿ ವೇಗಿ ಜೇಮ್ಸ್ ಆಂಡರ್ಸನ್ ಎರಡು ದಶಕಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಅಗ್ರ ಬ್ಯಾಟರ್‌ಗಳನ್ನು ಆಂಡರ್ಸನ್ ಎದುರಿಸಿದ್ದಾರೆ. ತಮ್ಮ ಪೇಸ್ ಮ್ಯಾಜಿಕ್‌ನಿಂದಲೇ ಬ್ಯಾಟರ್‌ಗಳನ್ನು ಬೆದರಿಸಿದ್ದಾರೆ. ಅಂತಹ ದಿಗ್ಗಜ ಬೌಲರ್, ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನನ್ನು ಮನಸಾರೆ ಹೊಗಳಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಅವರಂಥ ಉತ್ತಮ ಆಟಗಾರ ಇನ್ನೊಬ್ಬನಿಲ್ಲ ಎಂದು ಹೊಗಳಿಕೆಯ ಸುರಿಮಳೆಗೈಯ್ದಿದ್ದಾರೆ. ಅಷ್ಟಕ್ಕೂ ಆಂಡರ್ಸನ್ ಅವರಿಂದ ಪ್ರಶಂಸೆ ಪಡೆದ ಆ ಭಾರತೀಯ ಬ್ಯಾಟ್ಸ್‌ಮನ್ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆಂಡರ್ಸನ್ ಮೆಚ್ಚಿದ ಟೀಮ್ ಇಂಡಿಯಾ ಆಟಗಾರ ಬೇರೆ ಯಾರೂ ಅಲ್ಲ, ಅವರೇ ದಾಖಲೆಗಳ ಸರದಾರ, ರನ್ ಮೆಷಿನ್ ಹಾಗೂ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ. ಕ್ರಿಕೆಟ್ ಇತಿಹಾಸದಲ್ಲೇ ಇಂಥಾ ಒಬ್ಬ ಆಟಗಾರ ಮತ್ತೊಬ್ಬನಿಲ್ಲ ಎಂದು ಕೊಹ್ಲಿಯನ್ನು ಆಂಡರ್ಸನ್ ಹೊಗಳಿದ್ದಾರೆ. ಟೈಲೆಂಡರ್ಸ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಅಂಡರ್ಸನ್, ವಿರಾಟ್ ಬಗ್ಗೆ ಸಾಕಷ್ಟು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಎರಡನೇ ಇನಿಂಗ್ಸ್‌ನಲ್ಲಿ ತುಂಬಾ ಉತ್ಸುಕತೆ ತೋರುವ ವಿರಾಟ್ ಕೊಹ್ಲಿಯಷ್ಟು ಚೇಸಿಂಗ್ ಮಾಡುವ ಬ್ಯಾಟ್ಸ್‌ಮನ್ ಮತ್ತೊಬ್ಬರಿಲ್ಲ. ಅವರು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಫಿನಿಶರ್ ಎಂಬುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ ಅವರು ಚೇಸಿಂಗ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಶತಕಗಳು ನಂಬಲು ಅಸಾಧ್ಯವಾಗಿದ್ದವು. ಕೊಹ್ಲಿಗೆ ಅವರ ಮೇಲೆಯೇ ಹೆಚ್ಚು ವಿಶ್ವಾಸ ಇದೆ. ಆ ಕಾರಣದಿಂದಲೇ ಅವರು ಚೇಸಿಂಗ್‌ನಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಂಡರ್ಸನ್ ಹೇಳಿದರು.
ಚೇಸಿಂಗ್ ಸಮಯದಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಕೊಹ್ಲಿ ತಮ್ಮ ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸುಲಭವಾಗಿ ಜಯಿಸುತ್ತಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅವರಿಗಿಂತ ಉತ್ತಮ ಫಿನಿಶರ್ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ದಂತಕಥೆ ಮೈಕೆಲ್ ಬೆವನ್ ಅತ್ಯುತ್ತಮ ಫಿನಿಶರ್ ಎಂದು ಕೆಲವರು ಹೇಳುತ್ತಾರೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಬೆವನ್, ಸ್ಫೋಟಕ ಇನ್ನಿಂಗ್ಸ್‌ನೊಂದಿಗೆ ಪಂದ್ಯಗಳನ್ನು ಕಸಿದುಕೊಳ್ಳುತ್ತಾರೆ ಎಂಬ ಮಾತಿದೆ. ಈ ಬಗ್ಗೆ ಕೇಳಿದಾಗ ಬೆವನ್ಗಿಂತ ಕೊಹ್ಲಿ ಉತ್ತಮ ಎಂದು ಆಂಡರ್ಸನ್ ಹೇಳಿದರು.
3ನೇ ಕ್ರಮಾಂಕದಲ್ಲಿ ಬಂದು ಕೊನೆಯವರೆಗೂ ಬ್ಯಾಟಿಂಗ್ ಮಾಡುತ್ತೇನೆ ಮತ್ತು ಪಂದ್ಯವನ್ನು ಮುಗಿಸದೆ ಹೊರಗೆ ಹೋಗುವುದಿಲ್ಲ ಎಂಬುದು ಕೊಹ್ಲಿಯ ಮನಸ್ಥಿತಿ. ಅದ್ಧೂರಿ ಶತಕಗಳನ್ನು ಬಾರಿಸಿ ತಂಡವನ್ನು ಗುರಿ ಮುಟ್ಟಿಸುತ್ತಾರೆ. ಕ್ರಿಕೆಟ್ ಇತಿಹಾಸದಲ್ಲಿ ಅವರಿಗಿಂತ ಉತ್ತಮ ಫಿನಿಶರ್ ಇಲ್ಲ. ಅವರನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೊಂಡಾಡಿದ್ದಾರೆ. (ಏಜೆನ್ಸೀಸ್)