

ಹೈದರಾಬಾದ್: ಓಯೋ ರೂಮ್ ಎಂಬ ಪದವನ್ನು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಯಾವ ಆಲೋಚನೆಗಳು ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಇತ್ತೀಚಿಗೆ ನಡೆದ ಘಟನೆಯೊಂದನ್ನು ನೋಡಿದರೆ, ಓಯೋ ರೂಂಗಳಿಗೆ ಹೋಗುವುದಕ್ಕೂ ಭಯವಾಗುತ್ತೆ! ಹೌದು, ಓಯೋ ರೂಮ್ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಅಲ್ಲಿಗೆ ಬರುವ ಜೋಡಿಯ ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಿಸಿ, ಭಾರಿ ಹಣಕ್ಕೆ ಬೇಡಿಕೆ ಇಡುತ್ತಿರುವ ದಂಧೆಯೊಂದು ಇದೀಗ ಬಯಲಾಗಿದೆ. ಈ ಘಟನೆ ಸದ್ಯ ಸಂಚಲನ ಮೂಡಿಸುತ್ತಿದೆ.
ಹೈದರಾಬಾದ್ ಉಪನಗರ ಶಂಶಾಬಾದ್‌ನಲ್ಲಿರುವ ಸೀತಾ ಗ್ರ್ಯಾಂಡ್ ಓಯೋ ಹೋಟೆಲ್‌ನಲ್ಲಿ ರಹಸ್ಯ ಕ್ಯಾಮೆರಾಗಳು ಪತ್ತೆಯಾಗಿರುವ ಸುದ್ದಿ ಭಾರಿ ಸಂಚಲನ ಮೂಡಿಸಿವೆ. ಪೊಲೀಸರ ಪ್ರಕಾರ, ಒಂಗೋಲ್ ಮೂಲದ ಗಣೇಶ್ ಎಂಬವರು ಓಯೋ ಹೋಟೆಲ್ ನಡೆಸುತ್ತಿದ್ದಾರೆ. ಮಲಗುವ ಕೋಣೆಗಳಲ್ಲಿರುವ ಬಲ್ಬ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ದಂಪತಿ ಅಥವಾ ಪ್ರೇಮಿಗಳ ಸರಸ ಸಲ್ಲಾಪ ದೃಶ್ಯಗಳನ್ನು ಸೆರೆಹಿಡಿದಿರುವ ಗಂಭೀರ ಆರೋಪ ಕೇಳಿಬಂದಿದೆ.
ವಿಡಿಯೋ ಸೆರೆಹಿಡಿದ ಬಳಿಕ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದು, ಹಣ ಕೊಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೆದರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಕ್ಯಾಮೆರಾಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಲಾಡ್ಜ್‌ಗೆ ಬಂದ ಯುವಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಉತ್ತರ ಪ್ರದೇಶದ ನೋಯ್ಡಾದ ಅನೇಕ ಓಯೋ ಹೋಟೆಲ್‌ಗಳಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಗ್ಯಾಂಗ್ ಅನ್ನು ಪೊಲೀಸರು ಬೇಧಿಸಿದ್ದರು. ದಂಪತಿ ದೂರಿನ ಮೇರೆಗೆ ಪೊಲೀಸರು ಓಯೋ ಹೋಟೆಲ್‌ಗೆ ತೆರಳಿ ಆರೋಪಿಗಳನ್ನು ಬಂಧಿಸಲಾಗಿತ್ತು. ದಂಪತಿ ತಂಗಿದ್ದ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಡಲಾಗಿತ್ತು. ಕೆಲವು ದಿನಗಳ ನಂತರ ದುಷ್ಕರ್ಮಿಗಳ ಗುಂಪು ದಂಪತಿಯನ್ನು ಸಂಪರ್ಕಿಸಿ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹಣ ಕೊಡದಿದ್ದರೆ ವಿಡಿಯೋ ಹಂಚುವುದಾಗಿ ಬೆದರಿಕೆ ಹಾಕಿದ್ದರು.
ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿ, ತನಿಖೆ ತೀವ್ರಗೊಳಿಸಿದಾಗ ಇದರಲ್ಲಿ ಹೋಟೆಲ್ ಸಿಬ್ಬಂದಿಯ ಪಾತ್ರವಿಲ್ಲ ಎಂದು ತಿಳಿದುಬಂದಿತು. ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್, ಅನುರಾಗ್ ಕುಮಾರ್ ಸಿಂಗ್ ಹೀಗೆ ಮೂರು ಪ್ರತ್ಯೇಕ ಗ್ಯಾಂಗ್‌ಗಳಿಗೆ ಸೇರಿದವರನ್ನು ಪೊಲೀಸರು ಬಂಧಿಸಿದ್ದರು. ಹೋಟೆಲ್ ರೂಮ್ ಬುಕ್ ಮಾಡಿ ಕ್ಯಾಮೆರಾ ಅಳವಡಿಸುತ್ತಿದ್ದರು. ದಂಪತಿಗಳು ಬಂದು ಹೋದ ಬಳಿ ಅದೇ ರೂಮ್ಗೆ ತೆರಳಿ ಕ್ಯಾಮೆರಾದಿಂದ ವಿಡಿಯೋ ಪಡೆದು ಬ್ಲಾಕ್ಮೇಲ್ ಮಾಡುತ್ತಿದ್ದರು. ಅಂದು ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. (ಏಜೆನ್ಸೀಸ್)