

ನವದೆಹಲಿ: ಐಸಿಸಿ ಬಿಡುಗಡೆಗೊಳಿಸಿರುವ ವಿಶ್ವಕಪ್ ಪ್ರಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೂರ್ನಿಯ ಟ್ಯಾಗ್ಲೈನ್ ಅನ್ನೂ ಇದು ಪ್ರಕಟಿಸಿದೆ. 'ಎಲ್ಲದಕ್ಕೂ ಬೇಕಾಗಿರುವುದು ಒಂದು ದಿನ' (ಆಲ್ ಇಟ್ ಟೇಕ್ಸ್ ಇಸ್ ಒನ್ಡೇ) ಎಂಬುದು ಟೂರ್ನಿಯ ಪ್ರಮುಖ ಧ್ಯೇಯವಾಕ್ಯವಾಗಿರುತ್ತದೆ.
'ಇತಿಹಾಸ ನಿರ್ಮಿಸುವುದಕ್ಕೂ, ಇತಿಹಾಸವಾಗುವುದರ ನಡುವಿನ ಅಂತರ ಒಂದು ದಿನ. ಆ ಒಂದು ದಿನದಲ್ಲಿ ಜೆರ್ಸಿ ಧರಿಸಲಾಗುತ್ತದೆ ಮತ್ತು ಎದೆಗಳು ಹೆಮ್ಮೆಯಿಂದ ಉಬ್ಬತ್ತವೆ. ಒಂದು ದಿನದಲ್ಲಿ ನೆನಪುಗಳು ಕೆತ್ತಲ್ಪಡುತ್ತವೆ. ಒಂದು ದಿನದಲ್ಲಿ ಭಯವನ್ನು ಜಯಿಸಲಾಗುತ್ತದೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಲಾಗುತ್ತದೆ. ಸಂತೋಷದ ಉತ್ತುಂಗದಿಮದ ದುಃಖದ ತಗ್ಗುಗಳವರೆಗೆ ಒಂದು ದಿನದಲ್ಲಿ ಎಲ್ಲವನ್ನೂ ಸ್ವೀಕರಿಸಲಾಗುತ್ತದೆ. ಇದು ವಿಶ್ವಕಪ್. ಇದುವರೆಗೆ ಕಂಡಿರುವ ಕನಸು ನನಸಾಗಲು ಬೇಕಾಗಿರುವುದು ಒಂದು ದಿನ' ಎಂದು ಶಾರುಖ್ ಖಾನ್ ಐಸಿಸಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಆತಿಥೇಯ ಭಾರತ ತಂಡ ಅಕ್ಟೋಬರ್ 8ರಂದು ಚೆನ್ನೈನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಒಟ್ಟು 48 ಪಂದ್ಯಗಳನ್ನು ಒಳಗೊಂಡ ಟೂರ್ನಿಯ ಪಂದ್ಯಗಳು ದೇಶದ 10 ತಾಣಗಳಲ್ಲಿ ನಡೆಯಲಿವೆ. ನವೆಂಬರ್ 19ರಂದು ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.