

ನವದೆಹಲಿ: ಬಾಲಿವುಡ್ ತಾರೆ ಶಾರುಖ್ ಖಾನ್ ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಐಸಿಸಿ ಗುರುವಾರ ಬಿಡುಗಡೆ ಮಾಡಿರುವ 2 ನಿಮಿಷ, 13 ಸೆಕೆಂಡ್ಗಳ ವಿಶ್ವಕಪ್ ಪ್ರಚಾರ ವಿಡಿಯೋದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವುದು ಇದರ ಸುಳಿವನ್ನು ನೀಡಿದೆ.
1975ರಿಂದ ನಡೆದಿರುವ ಏಕದಿನ ವಿಶ್ವಕಪ್ ಟೂರ್ನಿಗಳ ಪ್ರಮುಖ ಕ್ಷಣಗಳ ಝಲಕ್ ಒಳಗೊಂಡ ಐಸಿಸಿಯ ವಿಡಿಯೋಗೆ ಶಾರುಖ್ ಖಾನ್ ಹಿನ್ನೆಲೆ ಧ್ವನಿಯನ್ನೂ ನೀಡಿದ್ದು, ಕೊನೆಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್ ಮತ್ತು ಶುಭಮಾನ್ ಗಿಲ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಆತಿಥೇಯ ಭಾರತ ತಂಡ ಅಕ್ಟೋಬರ್ 8ರಂದು ಚೆನ್ನೈನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಒಟ್ಟು 48 ಪಂದ್ಯಗಳನ್ನು ಒಳಗೊಂಡ ಟೂರ್ನಿಯ ಪಂದ್ಯಗಳು ದೇಶದ 10 ತಾಣಗಳಲ್ಲಿ ನಡೆಯಲಿವೆ. ನವೆಂಬರ್ 19ರಂದು ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.