

ಮುಂಬೈ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿ ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ಈಗಾಗಲೇ ಪಾಕಿಸ್ತಾನ ಮತ್ತು ದುಬೈನತ್ತ (ಭಾರತ ತಂಡ) ಪ್ರಯಾಣ ಬೆಳೆಸಿವೆ. ಫೆಬ್ರವರಿ 19ರಂದು ಟೂರ್ನಿ ಆರಂಭವಾಗಲಿದ್ದು, ಫೆಬ್ರವರಿ 20ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಬಾರಿಯ ಟೂರ್ನಿಯಲ್ಲಿ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಟೀಮ್ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದ್ದು, ಬಿಸಿಸಿಐ ವಿಧಿಸಿರುವ ಕಠಿಣ ಷರತ್ತುಗಳಿಗೆ ತಲೆಬಾಗಿದೆ. ಆದರೆ, ಬಿಸಿಸಿಐನ (BCCI) ನಿಯಮಕ್ಕೆ ಓರ್ವ ಆಟಗಾರ ಖ್ಯಾತೆ ತೆಗೆದಿದ್ದಾನೆ ಎಂಬ ಮಾತು ಕೇಳಿ ಬಂದಿದ್ದು, ಚರ್ಚಾಸ್ಪದವಾಗಿದೆ.
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ನೂತನ ಪ್ರಯಾಣ ನಿಯಮಾವಳಿ ಯನ್ನು ಜಾರಿಗೊಳಿಸಲು ಬಿಸಿಸಿಐ (BCCI) ನಿರ್ಧರಿಸಿದೆ. ಇದರನ್ವಯ ಭಾರತ ತಂಡದ ಆಟಗಾರರು ಫೆಬ್ರವರಿ 15ರಂದು ದುಬೈಗೆ ಪ್ರಯಾಣಿಸುವ ವೇಳೆ ಪತ್ನಿ, ಮಕ್ಕಳ ಸಹಿತ ಕುಟುಂಬ ಸದಸ್ಯರನ್ನು ಕರೆದೊಯ್ಯಲು ನಿರ್ಬಂಧ ಹೇರಲಾಗಿದೆ.
ಫೆ.20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಫೆ. 23ಕ್ಕೆ ಪಾಕಿಸ್ತಾನ ಮತ್ತು ಮಾ.2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಟೂರ್ನಿಯ ಫೈನಲ್ ಮಾರ್ಚ್ 9ಕ್ಕೆ ನಿಗದಿಯಾಗಿದೆ. ಟೂರ್ನಿಯ ಒಟ್ಟಾರೆ ಅವಧಿ ಸುಮಾರು ಮೂರು ವಾರ ಆಗಿದೆ. ಹೀಗಾಗಿ ಕುಟುಂಬ ಸದಸ್ಯರಿಗೆ ಆಟಗಾರರ ಜತೆಗೆ ವಸತಿ ವ್ಯವಸ್ಥೆ ಮಾಡಲು ಬಿಸಿಸಿಐ (BCCI) ನಿರಾಕರಿಸಿದೆ. ಬಿಸಿಸಿಐನ ಹೊಸ ನಿಯಮಾವಳಿ ಅನ್ವಯ 45 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಪ್ರವಾಸದ ವೇಳೆ ಆಟಗಾರರು ಗರಿಷ್ಠ 2 ವಾರಗಳನ್ನು ಕುಟುಂಬದೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ.
ದುಬೈಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯುವ ಬಗ್ಗೆ ಹಿರಿಯ ಆಟಗಾರರ ಕೇಳಿದಾಗ ಹೊಸ ನಿಯಮಾವಳಿಯನ್ನು ಅವರಿಗೆ ತಿಳಿಸಲಾಗಿದೆ. ಈ ಪ್ರವಾಸ ಒಂದು ತಿಂಗಳಿಗೂ ಕಡಿಮೆ ಅವಧಿಯದ್ದಾಗಿದೆ. ಹೀಗಾಗಿ ನಿರ್ಬಂಧಿಸಲಾಗಿದೆ. ಒಂದು ವೇಳೆ ವಿನಾಯಿತಿ ನೀಡಿದರೂ, ಕುಟುಂಬದ ಸದಸ್ಯರ ಪ್ರಯಾಣ, ವಸತಿಯ ವೆಚ್ಚವನ್ನು ಆಟಗಾರರೇ ಭರಿಸಬೇಕಾಗಬಹುದು ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಆದರೆ, ಇದಕ್ಕೆ ವಿರುದ್ಧವಾಗಿ ಸ್ಟಾರ್ ಆಟಗಾರರೊಬ್ಬರು ಚಾಂಪಿಯನ್ಸ್ ಟ್ರೋಫಿಯಲ್ಲಿ ಪತ್ನಿಯನ್ನು ಕರೆತರಲು ಅವಕಾಶ ಕೋರಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಟಗಾರನ ಮನವಿಯನ್ನು ತಿರಸ್ಕರಿಸಿದ್ದು, ಖಡಕ್ ಸೂಚನೆ ನೀಡಿರುವುದಾಗಿ ವರದಿಯಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.