

ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್, ಡಿಸೆಂಬರ್ 30ರಂದು ನುಸುಕಿನ ಜಾವ ದೆಹಲಿಯಿಂದ ರೂರ್ಕಿಗೆ ತೆರಳುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದ್ದರು. ಅಪಘಾತದಲ್ಲಿ ಗಂಭಿರ ಗಾಯಗೊಂಡಿದ್ದ ಪಂತ್, ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂತ್ ಅಪಘಾತದ ಸುದ್ದಿ ಹಬ್ಬುತ್ತಿದ್ದಂತೆ ಎಲ್ಲೆಡೆಯಿಂದ ಎಲ್ಲರೂ ಪಂತ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. ಇದೀಗ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ಟಿ-20 ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಸೇರಿದಂತೆ ತಂಡದ ಸಹ ಆಟಗಾರರು ವಿಡಿಯೋ ಮೂಲಕ ಸಂದೇಶವೊಂದುನ್ನು ರವಾನಿಸಿದ್ದಾರೆ. ಶ್ರೀಲಂಕಾ ಟಿ-20 ಸರಣಿ ಆರಂಭಕ್ಕೂ ಮುನ್ನ ಪಂತ್ ಚೇತರಿಸಿಕೊಂಡು, ಮತ್ತೆ ಮೈದಾನಕ್ಕಿಳಿಯಲಿ ಎಂದು ಹಾರೈಸಿದ್ದಾರೆ.
ವಿಡಿಯೋದಲ್ಲಿ ಕೋಚ್ ದ್ರಾವಿಡ್ ಮಾತನಾಡುತ್ತಾ, ಕಳೆದ ಒಂದು ವರ್ಷದ ಟೆಸ್ಟ್ ಕ್ರಿಕೆಟ್ನಲ್ಲಿ ನಿಮ್ಮ ಅತ್ಯುತ್ತಮ ಇನ್ನಿಂಗ್ಸ್ಗಳನ್ನು ನಾನು ನೋಡಿದ್ದೇನೆ. ಕಷ್ಟದ ಸಂದರ್ಭವನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಶೀಘ್ರವಾಗಿ ನೀವು ಗುಣಮುಖರಾಗಿ ಮತ್ತೆ ಕ್ರಿಕೆಟ್ಗೆ ಮರುಳುತ್ತೀರಿ ಎಂಬುದು ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನೀವೊಬ್ಬ ಅದ್ಭುತ ಹೋರಾಟಗಾರ ಎಂಬುದು ನನಗೆ ಗೊತ್ತಿದೆ. ಸದ್ಯ ಎದುರಾಗಿರುವ ಎಲ್ಲಾ ಆಪತ್ತನ್ನು ಬಗೆಹರಿಸಿ ಮತ್ತೆ ಎಂದಿನಂತಾಗುತ್ತೀರಿ ಎಂಬ ಭರವಸೆ ನನಗಿದೆ. ನಿಮ್ಮ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದು ಟೀಂ ಇಂಡಿಯಾದ ಟಿ-20 ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)