

ಆಸ್ಟ್ರೇಲಿಯಾ: ಇಂದು ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾ ಓವಲ್‌ನಲ್ಲಿ ನಡೆದ ಭಾರತ ಮತ್ತು ಆಸೀಸ್ (IND vs AUS 4th T20) ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ 48 ರನ್ಗಳಿಂದ ಸೂರ್ಯಕುಮಾರ್ ಯಾದವ್ ಪಡೆ ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸೀಸ್, ಟೀಮ್ ಇಂಡಿಯಾಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಸೂರ್ಯ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ಗಳಿಸಲು ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಕಾಂಗೂರು ಪಡೆಯ ದೈತ್ಯ ಬ್ಯಾಟರ್ಗಳು, ಟೀಮ್ ಇಂಡಿಯಾ ನೀಡಿದ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದರು. ತಂಡದ ಪರ ಬೌಲರ್ಗಳು ಕಮಾಲ್ ಮಾಡಿದ್ದು, ನಾಲ್ಕನೇ ಪಂದ್ಯದ ಜಯಕ್ಕೆ ಪ್ರಮುಖ ಕಾರಣರಾದರು.
ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ 3 ವಿಕೆಟ್ಗಳನ್ನು ಕಬಳಿಸಿದರೆ, ಶಿವಂ ದುಬೆ, ಅಕ್ಸರ್ ಪಟೇಲ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಯೂನಿಟ್ ಎಂಬುದನ್ನು ಸಾಬೀತುಪಡಿಸಿದರು.
ಭಾರತದ ಪರ ಶುಭಮನ್ ಗಿಲ್ (46 ರನ್, 39 ಎಸೆತ, 4 ಬೌಂಡರಿ, 1 ಸಿಕ್ಸರ್), ಅಭಿಷೇಕ್ ಶರ್ಮಾ (28 ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್), ಶಿವಂ ದುಬೆ (22 ರನ್, 18 ಎಸೆತ, 1 ಬೌಂಡರಿ, 1 ಸಿಕ್ಸರ್), ಸೂರ್ಯಕುಮಾರ್ ಯಾದವ್ (20 ರನ್, 10 ಎಸೆತ, 2 ಸಿಕ್ಸರ್) ಉತ್ತಮ ಇನ್ನಿಂಗ್ಸ್ ನೀಡಿದರೆ, ಅಂತಿಮವಾಗಿ, ಅಕ್ಷರ್ ಪಟೇಲ್ (ಅಜೇಯ 21 ರನ್, 11 ಎಸೆತ, 1 ಬೌಂಡರಿ, 1 ಸಿಕ್ಸರ್) ಕ್ರೀಸ್ನಲ್ಲಿ ಉಳಿದರು.